ಕಾಂಗ್ರೆಸ್‌ನೊಂದಿಗೆ ಒಳ ಒಪ್ಪಂದ, ಸ್ಪರ್ಧಾ ಕಣದಿಂದ ಹಿಂದೆ ಸರಿದ ಜೆಡಿಎಸ್‌ ಅಭ್ಯರ್ಥಿ ವಿರುದ್ಧ ಆಕ್ರೋಶ

ಹೊಸದಿಗಂತ ವರದಿ ವಿಜಯಪುರ:

ಕಾಂಗ್ರೆಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು, ಸ್ಪರ್ಧಾ ಕಣದಿಂದ ಹಿಂದೆ ಸರಿದಿರುವ ನಗರ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬಂದೇನವಾಜ್ ಮಹಾಬರಿಗೆ ನಾಚಿಕೆ ಆಗಬೇಕು ಎಂದು ಹಿಂದು ಮುಖಂಡ ರಾಘವ ಅಣ್ಣಿಗೇರಿ ಕಿಡಿಕಾರಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ಚುನಾವಣೆ ಕಣದಿಂದ ಜೆಡಿಎಸ್‌ ಅಭ್ಯರ್ಥಿ ಮಹಾಬರಿ ಹಿಂದೆ ಬಂದಿದ್ದು, ಇದರ ಹಿಂದೆ ಕಾಂಗ್ರೆಸ್, ಜೆಡಿಎಸ್‌ ಒಳ ಒಪ್ಪಂದವಿದೆ ಎಂದು ದೂರಿದರು.

ಕಾಂಗ್ರೆಸ್, ಜೆಡಿಎಸ್‌ ಸೇರಿಕೊಂಡು ಗದ್ದಲ, ಗೂಂಡಾಗಿರಿ ಮಾಡಲು ಹೊರಟಿದ್ದಾರೆ. ಅಲ್ಲದೇ, ಜೆಡಿಎಸ್‌, ಕಾಂಗ್ರೆಸ್ ಅನೈತಿಕ ಬೆಂಬಲ ನೀಡಿದ್ದಾರೆ. ಇದಕ್ಕೆ ರಾಜ್ಯದ ಎದುರು ಉತ್ತರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖವಾಗಿವೆ. ಸುರಕ್ಷತೆ, ಹಿಂದುತ್ವ ಮೇಲೆ ವಿಜಯಪುರ ನಗರ ಮತಕ್ಷೇತ್ರದ ಚುನಾವಣೆ ಆಗುತ್ತದೆ. ಪಾರದರ್ಶಕವಾಗಿ ಪೊಲೀಸ್ ಇಲಾಖೆ, ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಕಳೆದ ಚುನಾವಣೆಯಲ್ಲಿ ಹಿಂದುತ್ವ ಏರಿಯಾದಲ್ಲಿ ಕಾಂಗ್ರೆಸ್ ನವರು ದಾಂಧಲೆ ಮಾಡಿದ್ದಾರೆ, ಇದು ಖಂಡನೀಯ. ಹೀಗಾಗಿ ಈ ಬಾರಿ ಅಂತಹ ಘಟನೆಗಳು ಆಗದಂತೆ ಪೊಲೀಸರು ಹದ್ದಿನ ಕಣ್ಣು ಇಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಜೆಡಿಎಸ್‌ ಅಭ್ಯರ್ಥಿ ಬಂದೇನವಾಜ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಎಂದು ಎಸ್ಪಿಗೆ ಮನವಿ ಮಾಡಿದರು.

ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ಅಣ್ಣಿಗೇರಿ ಕಿಡಿಕಾರಿದ್ದು, ಹಿಂದು ಅಂದರೆ ಅಶ್ಲೀಲ ಎಂದಿದ್ದ ಸತೀಶ ವಿರುದ್ಧ ವಾಗ್ದಾಳಿ ನಡೆಸಿ, ಕಾಣದ ಕೈಗಳಂತೆ ನಗರಕ್ಕೆ ಆಗಮಿಸಿ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಕಸರತ್ತು ನಡೆಯಲ್ಲ, ಏಕೆಂದರೆ ನಗರದಾದ್ಯಂತ ಎಲ್ಲ ಸಮಾಜದ ಮುಖಂಡರು ಶಾಸಕ ಯತ್ನಾಳ ಪರವಾಗಿ ಇದ್ದಾರೆ. ಕಳೆದ ಬಾರಿಯ ಮೂರು ಪಟ್ಟು ಹೆಚ್ಚಿನ ಮತಗಳಿಂದ ಯತ್ನಾಳ ಗೆಲುವು ಪಕ್ಕಾ ಎಂದರು.

ಜೆಡಿಎಸ್‌ ಅಭ್ಯರ್ಥಿ ಮಹಾಬರಿ ಕಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಇವರನ್ನು ಚುನಾವಣೆಯಿಂದ ಸಂಪೂರ್ಣವಾಗಿ ರದ್ದು ಮಾಡಬೇಕು. ಇಲ್ಲದೇ ಹೋದರೆ ಗೂಂಡಾಗಿರಿ, ಗಲಾಟೆ ಆಗುವ ಸಂಭವ ಇದೆ. ಹೀಗಾಗಿ ಚುನಾವಣಾಧಿಕಾರಿಗಳು ಇವರ ಮೇಲೆ ನಿಗಾವಹಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಪರಶುರಾಮ ರಜಪೂತ, ಸದಾಶಿವ ಗುಡ್ಡೋಡಗಿ, ಗುರು ಗಚ್ಚಿನಮಠ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!