ಅಂಡಮಾನ್ ಬಳಿ ಸಮುದ್ರದಲ್ಲಿ ಸಿಲುಕಿದ 100ಕ್ಕೂ ಹೆಚ್ಚು ರೋಹಿಂಗ್ಯಾಗಳು; ಹಲವರು ಮೃತಪಟ್ಟ ಶಂಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮ್ಯಾನ್ಮಾರ್‌ ದೇಶದಿಂದ ತಪ್ಪಿಸಿಕೊಂಡು ಸಮುದ್ರಕ್ಕೆ ಇಳಿದಿದ್ದ ಕನಿಷ್ಠ 100 ರೋಹಿಂಗ್ಯಾಗಳು ಭಾರತದ ಅಂಡಮಾನ್ ದ್ವೀಪದ ಬಳಿ ದೋಣಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರಲ್ಲಿ ಸುಮಾರು 16-20 ಜನರು ಬಾಯಾರಿಕೆ, ಹಸಿವು ಹಾಗೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ರೋಹಿಂಗ್ಯಾ ಕಾರ್ಯಕರ್ತರ ಗುಂಪುಗಳು ತಿಳಿಸಿವೆ.
ಮುಸ್ಲಿಂ ಅಲ್ಪಸಂಖ್ಯಾತ ಗುಂಪಾದ ರೋಹಿಂಗ್ಯಾಗಳು ಮ್ಯಾನ್ಮಾರ್‌ನಲ್ಲಿನ ಹಿಂಸಾಚಾರ ಮತ್ತು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿನ ದುರಾವಸ್ಥೆಗಳಿಂದ ತಪ್ಪಿಸಿಕೊಳ್ಳಲು ತಮ್ಮ ಪ್ರಾಣವನ್ನು ಅಪಾಯಕ್ಕಿಟ್ಟು ಮಲೇಷ್ಯಾ ತಲುಪಲು ಪ್ರಯತ್ನಿಸುತ್ತಾರೆ. ಇಂತಹ ಒಂದು ಗುಂಪು ಈಗ ಸಂಕಷ್ಟದಲ್ಲಿದೆ.
ಸಮುದ್ರದಲ್ಲಿ ಸಿಕ್ಕಿಬಿದ್ದ ದೋಣಿಯನ್ನು ಮಂಗಳವಾರ ತಡರಾತ್ರಿ ಐದು ಭಾರತೀಯ ಹಡಗುಗಳು ಸಮೀಪಿಸಿವೆ ಎಂದು ಮೂಲವೊಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ.
ಆದರೆ ಭಾರತೀಯ ನೌಕಾಪಡೆ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.”ಬಹುಶಃ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ನಾವು ಅಂದಾಜಿಸಿದ್ದೇವೆ, ಕೆಲವರು ಹಸಿವು ಮತ್ತು ಬಾಯಾರಿಕೆಯಿಂದ, ಮತ್ತು ಕೆಲವರು ಹತಾಶೆಯಿಂದ ಸಮುದ್ರಕ್ಕೆ ಹಾರಿದ್ದಾರೆ. ಇದು ಸಂಪೂರ್ಣವಾಗಿ ಭೀಕರ ಮತ್ತು ಅತಿರೇಕದ ಸಂಗತಿಯಾಗಿದೆ,” ಮ್ಯಾನ್ಮಾರ್‌ನ ರೋಹಿಂಗ್ಯಾಗಳ ರಕ್ಷಣೆಗೆ ಕೆಲಸ ಮಾಡುವ ಅರಕನ್ ಪ್ರಾಜೆಕ್ಟ್‌ನ ನಿರ್ದೇಶಕ ಕ್ರಿಸ್ ಲೆವಾ ಹೇಳಿದ್ದಾರೆ.
ಭಾರತೀಯ ನೌಕಾಪಡೆ ಸಾಧ್ಯವಾದಷ್ಟು ಬೇಗ ದೋಣಿಯನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಈ ಜನರು 2 ವಾರಗಳಿಗೂ ಹೆಚ್ಚು ಕಾಲ ಆಹಾರ ಮತ್ತು ನೀರಿಲ್ಲದೆ ಹಾನಿಗೊಳಗಾದ ದೋಣಿಯ ಮೇಲೆ ಅಲೆದಾಡುತ್ತಿದ್ದಾರೆ. ಈಗಾಗಲೇ 16 ಜನರು ಸಾವನ್ನಪ್ಪಿರಬಹುದು ಎಂದು ನಾವು ಕೇಳಿದ್ದೇವೆ ಎಂದು ರೋಹಿಂಗ್ಯಾ ವರ್ಕಿಂಗ್ ಗ್ರೂಪ್‌ನ ಅಧ್ಯಕ್ಷ ಲಿಲಿಯಾನ್ನೆ ಫ್ಯಾನ್ ಆತಂಕ ತೋಡಿಕೊಂಡಿದ್ದಾರೆ.
ನೂರಕ್ಕೂ ಹೆಚ್ಚು ರೊಹಿಂಗ್ಯಾಗಳನ್ನು ಹೊತ್ತೊಯ್ಯುತ್ತಿದ್ದ ಇನ್ನೊಂದು ದೋಣಿಯನ್ನು ಶ್ರೀಲಂಕಾದ ನೌಕಾಪಡೆ ವಾರಾಂತ್ಯದಲ್ಲಿ ರಕ್ಷಿಸಿತು.
2018 ರಲ್ಲಿ, ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸರ್ವಾಧಿಕಾರದ ಬಳಿಕ ರೋಹಿಂಗ್ಯಾ ಮುಸ್ಲಿಮರಿಗೆ ಆ ದೇಶದಲ್ಲಿ ಉಳಿಗಾಲ ವಿಲ್ಲವಾಗಿದೆ. ಸುಮಾರು 730,000 ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ. ಅವರ ಮೇಲೆ ಸಾಮೂಹಿಕ ಹತ್ಯೆಗಳು ಮತ್ತು ಅತ್ಯಾಚಾರಗಳು ನಡೆಯುತ್ತಿವೆ ಎಂದು ಸಾಕ್ಷಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!