Friday, July 1, 2022

Latest Posts

ದೇಶದ 40 ಕೋಟಿ ಜನರಿನ್ನೂ ಕೋವಿಡ್ ಅಪಾಯಕ್ಕೆ ಸಿಲುಕುವ ಆತಂಕದಲ್ಲಿ: ಸಮೀಕ್ಷೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದಂತೆ ದೇಶದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟು ಜನರು ಇನ್ನೂ ಕೋವಿಡ್-19ಸೋಂಕಿನ ಅಪಾಯಕ್ಕೆ ಸಿಲುಕಬಹುದಾಗಿದೆ ಎಂಬುದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ನಡೆಸಿದ ನಾಲ್ಕನೇ ಸಮೀಕ್ಷೆಯೊಂದರಲ್ಲಿ ಕಂಡುಕೊಳ್ಳಲಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಹೇಳಿದೆ. ಈ ಸಮೀಕ್ಷಾ ಫಲಿತಾಂಶ ಭಾರತದ ಪಾಲಿಗೊಂದು ಆಶಾಕಿರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಮೈಮರೆವು ಸಲ್ಲದೆಂದೂ ಎಚ್ಚರಿಸಿದ್ದಾರೆ.
ಈ ಸಮೀಕ್ಷೆಯಲ್ಲಿ ಕಂಡುಬಂದ ಪ್ರಕಾರ, ಜೂನ್-ಜುಲೈಯಲ್ಲಿ ನಡೆಸಿದ ರಾಷ್ಟ್ರೀಯ ಸೆರೊ ಸರ್ವೇಯಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಶೇ.67.6ರಷ್ಟು ಜನರಲ್ಲಿ ಸಾರ್ಸ್-ಕೋವ್-2 ಪ್ರತಿಕಾಯಗಳು ಕಂಡುಬಂದಿದೆ.ಮೊದಲ ಬಾರಿ ಆರು ವರ್ಷದ ಮೇಲ್ಪಟ್ಟ ಮಕ್ಕಳನ್ನೂ ಸಮೀಕ್ಷೆಯಲ್ಲಿ ಒಳಪಡಿಸಲಾಗಿದೆ.ಒಟ್ಟು ಆಯ್ದ 70ಜಿಲ್ಲೆಗಳಲ್ಲಿ ಇಂತಹ ಸಮೀಕ್ಷೆ ನಡೆಸಲಾಗಿದೆ.
ಹಾಗೆಯೇ 6-9ವರ್ಷದ ಮಕ್ಕಳ ಪೈಕಿ ಶೇ.57.2ಮಂದಿಯಲ್ಲಿ ಸೆರೊ ಪಾಸಿಟಿವಿಟಿ ಪ್ರಮಾಣ ಕಂಡುಬಂದಿದ್ದರೆ,10-17ರ ವಯಸ್ಸಿನ ಮಕ್ಕಳಲ್ಲಿ ಶೇ.61.6ರಷ್ಟು ಕಂಡುಬಂದಿದೆ.18-44ರ ಪ್ರಾಯದವರಲ್ಲಿ ಶೇ.66.7ರಷ್ಟು ಮತ್ತು 45-60ರ ವಯೋಮಾನದವರಲ್ಲಿ ಶೇ.77.6ರಷ್ಟು ಕಂಡುಬಂದಿದೆ.
ಶೇ.85ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಸಾರ್ಸ್-ಕೋವ್-2 ವಿರುದ್ಧದ ಪ್ರತಿಕಾಯಗಳು ಕಂಡುಬಂದಿದ್ದರೆ, ಹತ್ತನೇ ಒಂದು ಭಾಗದಷ್ಟು ಹೆಲ್ತ್ ಕೇರ್ ಕಾರ್ಯಕರ್ತರು (ಎಚ್‌ಸಿಡಬ್ಲ್ಯೂ) ಇನ್ನೂ ಲಸಿಕೆ ಪಡೆದಿಲ್ಲ . ಒಟ್ಟಾರೆಯಾಗಿ ಸುಮಾರು 40 ಕೋಟಿಯಷ್ಟು ಜನ ಇನ್ನೂ ಕೊರೋನಾ ಸೋಂಕಿಗೆ ತುತ್ತಾಗುವ ಅಪಾಯವಿದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ.28,975 ಮಂದಿ ಸಾರ್ವಜನಿಕರು ಮತ್ತು 7,252 ಆರೋಗ್ಯ ಕಾರ್ಯಕರ್ತರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಆದಾಗ್ಯೂ ಈ ಸಮೀಕ್ಷೆಯ ಫಲಿತಾಂಶ ಒಂದು ಬೆಳ್ಳಿರೇಖೆಯಾಗಿ ಗೋಚರಿಸುತ್ತಿದೆ . ಹಾಗೆಂದು ಯಾವುದೇ ಕಾರಣಕ್ಕೂ ಮೈಮರೆವಿಗೆ ಅವಕಾಶವಿಲ್ಲ . ನಾವು ಕೋವಿಡ್ ನಿಯಮಗಳನ್ನು ಪಾಲಿಸಿ ಸಮುದಾಯಗಳಲ್ಲಿ ಈ ಕುರಿತಂತೆ ಜಾಗೃತಿಯನ್ನು ಕಾಯ್ದುಕೊಳ್ಳುವುದನ್ನು ಸಡಿಲಗೊಳಿಸಲಾಗದು ಎಂಬುದಾಗಿ ಐಸಿಎಂಆರ್‌ನ ಮಹಾನಿರ್ದೇಶಕ ಬಲರಾಮ್ ಭಾರ್ಗವ್ ಹೇಳುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss