ಹೊಸದಿಗಂತ ವರದಿ, ಕುಶಾಲನಗರ:
ಕುಶಾಲನಗರ ಹೋಬಳಿಯ ವಿವಿಧ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯ ಸರಕಾರಿ ಜಮೀನುಗಳಲ್ಲಿ ಈಗಾಗಲೇ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕು ಪತ್ರ ನೀಡಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭರವಸೆ ನೀಡಿದ್ದಾರೆ.
ಮುಳ್ಳುಸೋಗೆ ಮತ್ತು ಇತರ ಗ್ರಾಮಗಳ ಕಾಮಗಾರಿಯ ಭೂಮಿ ಪೂಜೆಗೆ ಅಗಮಿಸಿದ ಸಂದರ್ಭ ತಮಗೆ ಹಕ್ಕುಪತ್ರ ನೀಡುವಂತೆ ಆ ವ್ಯಾಪ್ತಿಯ ನೂರಾರು ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಸ್ಪಂದಿಸಿ ಅವರು ಈ ಭರವಸೆ ನೀಡಿದರು.
ಹೋಬಳಿಯ ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಮನೆಗಳು ಪೈಸಾರಿ ಮತ್ತು ಕಂದಾಯ ಇಲಾಖೆಗೆ ಒಳಪಡುವ ಜಾಗದಲ್ಲಿ ನಿರ್ಮಾಣಗೊಂಡಿವೆ. ಈಗಾಗಲೇ ಮನೆಯನ್ನು ಕಟ್ಟಿಕೊಂಡಿರುವ ಗ್ರಾಮಸ್ಥರಿಗೆ ಹಕ್ಕು ಪತ್ರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರು ಅದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಬೇಕು. ಅದರ ಅಧಾರದ ಮೇಲೆ ತಾಲೂಕು ತಹಶೀಲ್ದಾರರು ನಿಯಮನುಸಾರವಾಗಿ ಪರಿಶೀಲನೆ ನಡೆಸಿದ ಬಳಿಕ ನಿಯಮಾನುಸಾರವಾಗಿ ಹಕ್ಕು ಪ್ರತಗಳನ್ನು ನೀಡಲಾಗುವುದು. ಅಲ್ಲದೆ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ವಿವಿಧ ಯೋಜನೆಗಳಡಿ ಮನೆ ನಿರ್ಮಿಸಿಕೊಂಡಿರುವವರಿಗೆ ಕೊನೆ ಹಂತದ ಬಾಕಿ ಹಣವನ್ನು ನೀಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ. ಆರ್ ಮಂಜುಳಾ, ಶ್ರೀನಿವಾಸ, ಕೂಡಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಗಳಾ ಪ್ರಕಾಶ್, ಉಪಾಧ್ಯಕ್ಷೆ ಮೋಹಿನಿ ತಮ್ಮಣೇಗೌಡ, ಮಾಜಿ ಉಪಾಧ್ಯಕ್ಷ ಗಿರೀಶ್ ಕುಮಾರ್, ಮುಳ್ಳುಸೋಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಲುವರಾಜ್, ಉಪಾಧ್ಯಕ್ಷೆ ಜಯಮ್ಮ, ಕೂಡುಮಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷ ಭಾಸ್ಕರ ನಾಯಕ, ಕೂಡುಮಂಗಳೂರು ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾದ ಮಂಜುನಾಥ, ಪ್ರಮೀಣ್, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬಿಜೆಪಿಯ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.