ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸ ದಿಗಂತ ವರದಿ, ಕಾಸರಗೋಡು:
ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ರೋಗಿಗಳು ಆತಂಕಗೊಂಡಿದ್ದಾರೆ. ಆಕ್ಸಿಜನ್ ಕೊರತೆಯಿಂದ ಕಾಸರಗೋಡು ನಗರದ ಎರಡು ಆಸ್ಪತ್ರೆಗಳಿಂದ ರೋಗಿಗಳು ಸ್ವಯಂ ಡಿಸ್ಚಾರ್ಜ್ ಆಗಿ ತೆರಳುವ ಸ್ಥಿತಿ ಎದುರಾಗಿದೆ.
ಕೇರಳ ರಾಜ್ಯ ವಾರ್ ರೂಮ್ ನಿಂದ ಜಿಲ್ಲೆಗೆ ತುರ್ತಾಗಿ ಆಮ್ಲಜನಕ ಪೂರೈಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ರಾಜ್ಯ ಮಟ್ಟದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಸರಗೋಡು ಜಿಲ್ಲೆಗೆ ಆಮ್ಲಜನಕ ಪೂರೈಕೆಯಾಗುತ್ತಿದ್ದು , ಆದರೆ ಕಳೆದ ಮೂರು ದಿನಗಳಿಂದ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಕರ್ನಾಟಕ ಆರೋಗ್ಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಗತ್ಯದ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಆರೋಗ್ಯ ಇಲಾಖೆಯು ತಿಳಿಸಿದೆ.
ಜಿಲ್ಲೆಗೆ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಪೂರೈಕೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತುರ್ತು ಗಮನಹರಿಸುವಂತೆಯೂ ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಒತ್ತಾಯಿಸಿದ್ದಾರೆ.
ಇದೇ ವೇಳೆ ಕೋವಿಡ್ ಸೋಂಕು ಖಚಿತಪಡಿಸಲು ಸರಕಾರದ ವತಿಯಿಂದ ನಡೆಸಲಾಗುತ್ತಿದ್ದ ಆರ್ಟಿಪಿಸಿಆರ್ ತಪಾಸಣೆಯನ್ನು ಏಕಾಏಕಿ ಕಡಿತಗೊಳಿಸಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ಇದರ ಲಾಭ ದೊರಕುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ದಾಖಲಾತಿಗಾಗಿ ಆಗಮಿಸುವ ರೋಗಿಗಳಿಗೆ ಹಾಗೂ ರೋಗ ತಪಾಸಣೆಗೆ ಆಗಮಿಸುವವರಿಗೆ ಆರ್ಟಿಪಿಸಿಆರ್ ನ ಬದಲಾಗಿ ಹೆಚ್ಚಿನ ಮೊತ್ತದ ಟ್ರುನಾಟ್ ತಪಾಸಣೆ ನಡೆಸುತ್ತಿರುವುದರಿಂದ ಜನಸಾಮಾನ್ಯರಿಗೆ ಅಪಾರ ಸಮಸ್ಯೆ ತಲೆದೋರಿದೆ.
ಆರ್ಟಿಪಿಸಿಆರ್ ತಪಾಸಣೆ ಕಡಿತಗೊಳಿಸಿರುವುದರಿಂದ ರೋಗಿಗಳು ಅನಿವಾರ್ಯವಾಗಿ ಹೆಚ್ಚಿನ ಮೊತ್ತದ ಟ್ರುನಾಟ್ ತಪಾಸಣೆಗೆ ಒಳಗಾಗುತ್ತಿದ್ದಾರೆ. ಆರ್ಟಿಪಿಸಿಆರ್ ತಪಾಸಣೆಗೆ ಸರಕಾರವು ನಿಗದಿಪಡಿಸಿರುವ ಮೊತ್ತ 500ರೂ. ಆಗಿದ್ದರೆ, ಟ್ರುನಾಟ್ ತಪಾಸಣೆಗೆ 1500 ರೂ. ಗಳಿಗೂ ಹೆಚ್ಚು ಖರ್ಚಾಗುತ್ತಿದೆ.