ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಶಿವಮೊಗ್ಗ:
ಮುಂದಿನ ಮೂರ್ನಾಲ್ಕು ದಿನದಲ್ಲಿ ಭದ್ರಾವತಿಯ ವಿಐಎಸ್ ಎಲ್ ಘಟಕದಲ್ಲಿ ಆಮ್ಲಜನಕ ಉತ್ಪಾದನೆ ಮಾಡಲಾಗುತ್ತಿದ್ದು, ಅಲ್ಲಿನ ಆಮ್ಲಜನಕ ಪ್ಲಾಂಟ್ಗೆ ಎಲ್ಲಾ ನೆರವು ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಲ್ಲಿ ಮಂಗಳವಾರ ಸೇವಾಭಾರತಿ, ಕೋವಿಡ್ ಸುರಕ್ಷಾ ಪಡೆ ಇವರು ಸಂಯುಕ್ತವಾಗಿ ಕೋವಿಡ್ ನಿಯಂತ್ರಣಕ್ಕೆ ಆರಂಭಿಸಿರುವ ಟೆಲಿಮೆಡಿಷನ್ ಕೇಂದ್ರ ಬ್ರೋಚರ್ ಬಿಡುಗಡೆ ಮಾಡಿ ಮಾತನಾಡಿದರು.
ಈಗಾಗಲೇ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಕಾರ್ಯನಿರ್ವಹಿಸುತ್ತಿದೆ. ಇದರ ಜತೆಗೆ ಭದ್ರಾವತಿಯಲ್ಲಿರುವ ಘಟಕವೂ ಸಕ್ರಿಯವಾದರೆ ಜಿಲ್ಲೆಗೆ ಬೇಕಾಗುಷ್ಟು ಆಮ್ಲಜನಕವನ್ನು ಇಲ್ಲಿಯೇ ಉತ್ಪಾದನೆ ಮಾಡಬಬಹುದಾಗಿದೆ. ಭದ್ರಾವತಿಯ ಘಟಕ ಆರಂಭಕ್ಕೆ ನೆರವು ನೀಡುವಂತೆ ಕೋರಿದ್ದು, ಅದಕ್ಕೆ ಸರ್ಕಾರದಿಂದ ಎಲ್ಲಾ ನೆರವು ಕೊಡಿಸಲಾಗುತ್ತದೆ ಎಂದರು.
ಕೋವಿಡ್ ನಿಯಂತ್ರಣ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಹೀಗಾಗಿ ಸ್ವಯಂ ಸೇವಾ ಸಂಸ್ಥೆಗಳು ಕೈ ಜೋಡಿಸಿದಾಗ ಸೋಂಕು ನಿಯಂತ್ರಣ ಸಾಧ್ಯವಾಗಲಿದೆ, ಈ ನಿಟ್ಟಿನಲ್ಲಿ ಸೇವಾ ಭಾರತಿ, ಕೋವಿಡ್ ಸುರಕ್ಷಾ ಪಡೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಔಷಧ ವ್ಯಾಪಾರಿಗಳ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮುಂದೆ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಮೆಗ್ಗಾನ್ ಆಸ್ಪತ್ರೆ ಮುಂಭಾಗದಲ್ಲಿಯೇ ಟೆಂಟ್ ಹಾಕಿ ಸ್ವಯಂ ಸೇವಕರು ಕೆಲಸ ಮಾಡಲಿದ್ದಾರೆ. ರೋಗಿಗಳಿಗೆ ಹಾಗೂ ಅವರ ನೋಡಿಕೊಳ್ಳಲು ಬಂದವರಿಗೆ ಊಟ, ಮೆಡಿಷಿನ್ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಬೆಡ್ಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಶಕ್ತಿ ಮೀರಿ ಯತ್ನ ಮಾಡಲಾಗುತ್ತದೆ ಎಂದರು.