Friday, July 1, 2022

Latest Posts

ಆಮ್ಲಜನಕ ಉತ್ಪಾದನೆ ಇದೆ, ನಿರ್ವಹಣೆ ಕೊರತೆ ಕಾಡುತ್ತಿದೆ: ಸಂಸದೆ ಶೋಭಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸ ದಿಗಂತ ವರದಿ, ಉಡುಪಿ:

ರಾಜ್ಯದಲ್ಲಿ ದ್ರವ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಆಗುತ್ತಿದೆ, ಆದರೆ ಅಸಮರ್ಪಕ ನಿರ್ವಹಣೆಯಿಂದ ಕೆಲವೆಡೆ ಸಮಸ್ಯೆ ಆಗಿದೆ. ಇದರಿಂದ ಕೋವಿಡ್ ಸೋಂಕಿತರು ಮೃತಪಡುತ್ತಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆ ಹಾಗೂ ಬೇರೆ ಜಿಲ್ಲೆಗಳಿಗೆ ಆಯಾ ದಿನಕ್ಕೆ ಬೇಕಾಗುವಷ್ಟು ಆಕ್ಸಿಜನ್ ಪೂರೈಕೆ ಆಗುತ್ತಿದೆ. ಸರಕಾರ ಚಾಮರಾಜನಗರ ಘಟನೆ ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಪರಸ್ಪರ ಜಿಲ್ಲೆಗಳ ಜೊತೆಯೂ ಹೊಂದಾಣಿಕೆ ಮಾಡಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ಕೋವಿಡ್ ಬೆಡ್ ದಂಧೆಯು ಅಮಾನವೀಯ ಬೆಳವಣಿಗೆ, ವ್ಯವಸ್ಥಿತ ಜಾಲ ಸರಕಾರಿ ವ್ಯವಸ್ಥೆಯ ಒಳಗೆ ನುಗ್ಗಿ, ಏನು ಅವ್ಯವಸ್ಥೆಯನ್ನು ಸೃಷ್ಟಿ ಮಾಡಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಬೆಡ್ ದಂಧೆ ಮಾಡಿದವರಿಗೆ 307 ಕೇಸು ದಾಖಲಿಸಬೇಕು, ಇದು ಕೊಲೆ ಮಾಡಿರುವುದಕ್ಕಿಂತ ಘೋರ ಅಪರಾಧ. ಆದ್ದರಿಂದ ಅಂಥವರ ಮೇಲೆ ಕೊಲೆ ಕೇಸು ದಾಖಲು ಮಾಡಿ ಆ ಕಂಪನಿಯನ್ನು ಪೂರ್ತಿ ಬರ್ಕಾಸ್ತು ಮಾಡಬೇಕು. ಶಾಮೀಲಾದ ಎಲ್ಲರಿಗೂ ಉಗ್ರ ಶಿಕ್ಷೆ ನೀಡಿ, ಅವರನ್ನು ಜೈಲಿಗಟ್ಟಬೇಕು. ಅವರೆಲ್ಲ ಪರಿಸ್ಥಿತಿ ದುರುಪಯೋಗ ಮಾಡುವವರು ರಾಕ್ಷಸರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಹಂಚಿಕೆಯ ಸಂಬಂಧ ಎಲ್ಲ ಸಂಸದರು ದಿಲ್ಲಿ ಮತ್ತು ರಾಜ್ಯ ಸರಕಾರದ ಜೊತೆಗೆ ಸಂಪರ್ಕದಲ್ಲಿದ್ದೇವೆ. ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಮೀರಿ ಬೇಡಿಕೆ ಬರುವುದರಿಂದ ಉತ್ಪಾದನೆ ಹೆಚ್ಚಿಸುವುದು ಮಾತ್ರ ಪರಿಹಾರ. ಅದಕ್ಕೆ ಕೇಂದ್ರ ಸರಕಾರ ಕ್ರಮ ತೆಗೆದುಕೊಂಡಿದೆ. ಅಲ್ಲದೇ ಪಿಎಂ ಕೇರ್ ಮೂಲಕ ಪ್ರತೀ ತಾಲೂಕು ಕೇಂದ್ರದಲ್ಲಿಯೂ ಆಕ್ಸಿಜನ್ ಉತ್ಪಾದನೆಗೆ ಹಣಕಾಸಿನ ನೆರವು ಕೊಟ್ಟಿದೆ. ಈಗಾಗಲೇ ಯಂತ್ರೋಪಕರಣಗಳು ಸರಬರಾಜು ಆಗುತ್ತಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕೋಒಡ್ ಮೂರನೇ ಅಲೆ ಇದಕ್ಕಿಂತ ತೀವ್ರವಾಗಿರುತ್ತದೆ. ಈಗ ಬರುವ ರೋಗಿಗಳಿಂತ ಮುಂದೆ ನಾಲ್ಕು ಪಟ್ಟು ಹೆಚ್ಚು ಬರಬಹುದು ಎಂಬ ಮುಂದಾಲೋಚನೆ ಮಾಡಿ, ಅದಕ್ಕೆ ಸಜ್ಜುಗೊಳ್ಳಬೇಕಿದೆ. ಆಸ್ಪತ್ರೆಗಳು, ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಹೆಚ್ಚಿಸುವುದು ಮತ್ತು ವಸತಿ ಶಾಲೆ, ಹಾಸ್ಟೆಲ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಬೇಕಿದೆ. ಹೆಚ್ಚು ಅಪಾಯವಿರುವವ ರೋಗಿಗಳನ್ನು ಆಸ್ಪತ್ರೆಗಳಲ್ಲಿ ಮತ್ತು ಕಡಿಮೆ ಅಪಾಯವಿರುವ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್‌ನ ಆಳ್ವಿಕೆಯ ಪರಿಣಾಮ ಕೋವಿಡ್ ನಿರ್ವಹಣೆಯ ವೈಲ್ಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಒಬ್ಬ ವಿಪಕ್ಷದ ಜವಾಬ್ದಾರಿಯುತ ನಾಯಕರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದಷ್ಟೇ ವಿಪಕ್ಷಕ್ಕೂ ಜವಾಬ್ದಾರಿ ಇದೆ. ವಿಪಕ್ಷಕ್ಕೆ ಸಲಹೆ ನೀಡುವ ಹೊಣೆಗಾರಿಕೆ ಇದೆ, ರಾಜೀನಾಮೆ ಕೇಳುವುದು ಪರಿಹಾರವಲ್ಲ. ವಿಪಕ್ಷ ನಾಯಕನಾಗಿ ವ್ಯವಸ್ಥೆ ಮಾಡುವುದು, ಅಧಿಕಾರಿಗಳ ಸಭೆ ಕರೆಯುವ ಅಧಿಕಾರ ಅವರಿಗಿದೆ. ಅದನ್ನು ಅವರೂ ಮಾಡಬಹುದು, ಅವರು ಮಾಜಿ ಮುಖ್ಯಮಂತ್ರಿ ಕಳೆದ 5ವರ್ಷಗಳಲ್ಲಿ ರಾಜ್ಯದಲ್ಲಿರುವ ವ್ಯವಸ್ಥೆಯನ್ನು ಅವರೂ ನೋಡಿದ್ದಾರೆ. ಇದು ನೀವೇ ಬಿಟ್ಟು ಹೋದ ಕೆಟ್ಟ ವ್ಯವಸ್ಥೆ, ಕಾಂಗ್ರೆಸ್ ಆಡಳಿತ ಕಳೆದ 50 ವರ್ಷಗಳಲ್ಲಿ ಯಾವುದೇ ಆಸ್ಪತ್ರೆಗಳಿಗೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡದಿದ್ದುದರ ಪರಿಣಾಮ ಇವತ್ತು ಈ ಪರಿಸ್ಥಿತಿ ಬಂದಿದೆ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಆಸ್ಪತ್ರೆಗಳನ್ನು ಉನ್ನತೀಕರಿಸಿಲ್ಲ, ಈ ಕಾರಣಕ್ಕಾಗಿ ಈ ಪರಿಸ್ಥಿತಿ ಬಂದಿದೆ. ಈ ವೈಫಲ್ಯವನ್ನೂ ಸಿದ್ದರಾಮಯ್ಯ ಒಪ್ಪಿಕೊಳ್ಳಬೇಕು ಎಂದು ಶೋಭಾ ತಿರುಗೇಟು ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss