ನಮಗೂ ರಿಯಾಯಿತಿಯಲ್ಲಿ ಕಚ್ಚಾ ತೈಲ ಕೊಡಿ ಎಂದು ಕೇಳಲು ಹೋಗಿದ್ದ ಪಾಕ್‌ ಗೆ ಮುಖಭಂಗ: ನಿಮಗೆ ಕೊಡಲ್ಲ ಎಂದ ರಷ್ಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಮ್ಮ ನೆರೆಯ ರಾಷ್ಟ್ರ ಭಾರತಕ್ಕೆ ನೀಡುವಂತೆ ನಮಗೂ ಕಚ್ಚಾ ತೈಲದ ಮೇಲೆ ಶೇಕಡಾ 30-40 ರಷ್ಟು ರಿಯಾಯಿತಿ ನೀಡಿ ಎಂದು ರಷ್ಯಾ ಬಳಿ ಕೇಳಲು ಹೋಗಿದ್ದ ಪಾಕಿಸ್ತಾನಕ್ಕೆ ಭಾರೀ ಮುಖಭಂಗ ಎದುರಾಗಿದೆ.
ಪ್ರಸ್ತುತ ನಿಮಗೆ ನಾವು ಏನನ್ನೂ ನೀಡಲು ಸಾಧ್ಯವಾಗುವುದಿಲ್ಲ ಎಂದಿರುವ ರಷ್ಯಾ, ಪಾಕ್‌ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ.
ನವೆಂಬರ್ 29 ರಂದು ಪಾಕಿಸ್ತಾನದ ಪ್ರತಿನಿಧಿ ನಿಯೋಗವು ರಷ್ಯಾ ಅಧಿಕಾರಿಗಳೊಂದಿಗೆ ಮೂರು ದಿನಗಳ ಭೇಟಿಗಾಗಿ ಮಾಸ್ಕೋಗೆ ಹೋಗಿತ್ತು. ಪಾಕಿಸ್ತಾನಿ ನಿಯೋಗವು ಪೆಟ್ರೋಲಿಯಂ ರಾಜ್ಯ ಸಚಿವ ಮುಸಾದಿಕ್ ಮಲಿಕ್, ಜಂಟಿ ಕಾರ್ಯದರ್ಶಿ ಮತ್ತು ಮಾಸ್ಕೋದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಒಳಗೊಂಡಿದ್ದು,ಮಾಸ್ಕೋದಲ್ಲಿ ಮಾತುಕತೆಯ ಸಂದರ್ಭದಲ್ಲಿ ಕಚ್ಚಾ ತೈಲದ ಮೇಲೆ ರಿಯಾಯಿತಿ ಕೇಳಿದೆ. ನಾವು ಹಲವು ದೇಶಗಳೊಂದಿಗೆ ಒಪ್ಪಂದಕ್ಕೆ ಬದ್ಧವಾಗಿರುವುದರಿಂದ ಇದೀಗ ನಿಮಗೆ ಏನನ್ನೂ ನೀಡಲು ಸಾಧ್ಯವಿಲ್ಲ ಎಂದು ರಷ್ಯಾ ಹೇಳುವುದರೊಂದಿಗೆ ಮಾತುಕತೆ ಕೊನೆಗೊಂಡಿತು.
ಇದೇ ವೇಳೆ ರಷ್ಯಾ, ಕರಾಚಿಯಿಂದ ಪಂಜಾಬ್‌ನ ಲಾಹೋರ್‌ಗೆ ಹಾಕಲಿರುವ ಪಾಕಿಸ್ತಾನ್ ಸ್ಟ್ರೀಮ್ ಗ್ಯಾಸ್ ಪೈಪ್‌ಲೈನ್‌ನ ಪ್ರಮುಖ ಯೋಜನೆಗೆ ತನ್ನ ಬದ್ಧತೆಯನ್ನು ಮೊದಲು ಗೌರವಿಸುವಂತೆ ಪಾಕಿಸ್ತಾನವನ್ನು ಕೇಳಿದೆ.
ಒಂದೆಡೆ ರಿಯಾಯ್ತಿ ಕಚ್ಚಾ ತೈಲ ಪೂರೈಕೆಗಾಗಿ ತನ್ನ ಬೇಡಿಕೆಯನ್ನು ಪರಿಗಣಿಸುವಂತೆ ಪಾಕಿಸ್ತಾನವು ರಷ್ಯಾವನ್ನು ವಿನಂತಿಸುತ್ತಿದ್ದರೆ, ಇತ್ತೀಚಿನ ತಿಂಗಳುಗಳಲ್ಲಿ ಭಾರತವು ರಷ್ಯಾದಿಂದ ತೈಲ ಆಮದುಗಳನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ.
ಮಧ್ಯಪ್ರಾಚ್ಯದಿಂದ ಭಾರತದ ಆಮದುಗಳು ಆಗಸ್ಟ್‌ನಲ್ಲಿ 16.2% ರಷ್ಟು ಕುಸಿದು ಸುಮಾರು 2.2 ಮಿಲಿಯನ್ ಬಿಪಿಡಿಗೆ ತಲುಪಿದೆ, ಆದರೆ ರಷ್ಯಾದಿಂದ ಆಮದುಗಳು ಸೆಪ್ಟೆಂಬರ್‌ನಲ್ಲಿ ಸುಮಾರು 896,000 ಬಿಪಿಡಿಗೆ 4.6% ಹೆಚ್ಚಾಗಿದೆ.
ಈಗ ಸಮುದ್ರದ ಮೂಲಕ ರಷ್ಯಾ ನಡೆಸುತ್ತಿರುವ ಎಲ್ಲಾ ಕಚ್ಚಾ ರಫ್ತುಗಳಲ್ಲಿ ಭಾರತ ಮತ್ತು ಚೀನಾವು ಮೂರನೇ ಎರಡರಷ್ಟು ಭಾಗವನ್ನು ಹೊಂದಿದೆ. ವಿಶ್ವಾಸಾರ್ಹ ಮತ್ತು ಉತ್ತಮ ಆರ್ಥಿಕತೆ ಹೊಂದಿರುವ ತನ್ನ ದೊಡ್ಡ ಖರೀದಿದಾರ ದೇಶಗಳಿಗೆ ಸೂಕ್ತ ಸಮಯದಲ್ಲಿ ಕಚ್ಚಾ ತೈಲ ಒದಗಿಸುವುದು ರಷ್ಯಾದ ಮೊದಲ ಆದ್ಯತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!