ಭಾರತವನ್ನು ದೂಷಿಸುವ ಮುನ್ನ ಪಾಕಿಸ್ತಾನ ಆತ್ಮಾವಲೋಕನ ಮಾಡಿಕೊಳ್ಳಲಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮಿಥ್ಯಾರೋಪಗಳಿಗೆ ಭಾರತ ಪ್ರತಿಕ್ರಿಯಿಸಿದ್ದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತದಲ್ಲಿರುವ ಅಲ್ಪಸಂಖ್ಯಾತರು ಮತ್ತು ಕಾಶ್ಮೀರ ವಿಷಯಗಳ ಕುರಿತು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಮಾಡಿದ ಟೀಕೆಗಳ ವಿರುದ್ಧ ಭಾರತವು ತನ್ನ ‘ಪ್ರತ್ಯುತ್ತರ ಹಕ್ಕನ್ನು’ ಚಲಾಯಿಸುವ ಮೂಲಕ ತಿರುಗೇಟು ನೀಡಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) 77 ನೇ ಅಧಿವೇಶನದ ನೇಪಥ್ಯದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತಾಗಿ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಭಾರತೀಯ ರಾಜತಾಂತ್ರಿಕ ಅಧಿಕಾರಿ ಶ್ರೀನಿವಾಸ್ ಗೋಟ್ರು, ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೊದಲು ಪಾಕಿಸ್ತಾನವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನೆನಪಿಸಿದ್ದಾರೆ.

ಪಾಕಿಸ್ತಾನಕ್ಕೆ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಮಾತಾಡಲು ನೈತಿಕತೆಯಿಲ್ಲ.

“ಪಾಕಿಸ್ತಾನ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ. ತನ್ನ ನಾಚಿಕೆಗೇಡಿನ ದಾಖಲೆಯನ್ನು ಮರೆಮಾಚಲು ತನ್ನ ಡೇಟಾವನ್ನು ಪ್ರಕಟಿಸುವುದನ್ನು ನಿಲ್ಲಿಸಿದ ದೇಶವೊಂದು ಈ ವಿಷಯವನ್ನು ಉಲ್ಲೇಖಿಸುತ್ತಿರುವುದು ಆಶ್ಚರ್ಯಕರವಾಗಿದೆ. ಜಗತ್ತು ಕಂಡಿರುವ ಘೋರ ಉಲ್ಲಂಘನೆಗಳನ್ನು ಮಾಡಿದ ಇತಿಹಾಸ ಇದಕ್ಕಿದೆ. ಪಾಕಿಸ್ತಾನ ತನ್ನ ಅಲ್ಪಸಂಖ್ಯಾತರಿಗೆ ಏನು ಮಾಡಿದೆ ಎಂದು ನಮಗೆ ತಿಳಿದಿದೆ. ಇದು ಅವರನ್ನು ನಾಶಮಾಡಿದೆ … ” ಎಂದು ಗೋಟ್ರು ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ವಿಶ್ವ ಸಂಸ್ಥೆಗೆ ನೆನಪಿಸಿದ ಅವರು ಪಾಕಿಸ್ತಾನದಲ್ಲಿ ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಕುಟುಂಬಗಳ ಹುಡುಗಿಯರ ಬಲವಂತದ ಅಪಹರಣ ಮತ್ತು ಮದುವೆಯ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿದ್ದಾರೆ.

“ಇಂದಿಗೂ ಸಹ, ಪಾಕಿಸ್ತಾನವು ಸಿಖ್ಖರು, ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಅಹ್ಮದೀಯರ ಹಕ್ಕುಗಳನ್ನು ಉಲ್ಲಂಘಿಸುವುದನ್ನು ಮುಂದುವರೆಸಿದೆ… ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳಿಂದ ಸಾವಿರಾರು ಮಹಿಳೆಯರು ಮತ್ತು ಮಕ್ಕಳು, ಪಾಕಿಸ್ತಾನದೊಳಗೆ ಅಪಹರಣ, ಬಲವಂತದ ವಿವಾಹಗಳು ಮತ್ತು ಮತಾಂತರಗಳಿಗೆ ಒಳಗಾಗಿದ್ದಾರೆ” ಎಂದು ಅವರು ಉಲ್ಲೇಖಿಸಿದ್ದಾರೆ.

ಕಾಶ್ಮೀರದ ಕುರಿತು ಯೋಚಿಸುವ ಬದಲು ಪಾಕಿಸ್ತಾನ ಭಯೋತ್ಪಾದನೆ ನಿಗ್ರಹಿಸಲಿ

ಇನ್ನು ಕಾಶ್ಮೀರ ಹಾಗೂ 370ನೇ ವಿಧಿಯ ರದ್ದತಿಯ ಬಗ್ಗೆ ಮಾತನಾಡಿರಿವ ಪಾಕಿಸ್ತಾನಕ್ಕೆ ಗೋಟ್ರು ಅವರು ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಮೇಲೆ ಹಕ್ಕು ಸಾಧಿಸುವ ಬದಲು ಇಸ್ಲಾಮಾಬಾದ್ ‘ಗಡಿಯಾಚೆಗಿನ ಭಯೋತ್ಪಾದನೆ’ಯನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.
“ಪಾಕಿಸ್ತಾನದ ಪ್ರತಿನಿಧಿಗಳು ಏನೇ ಹೇಳಿದರೂ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!