166 ಮಂದಿ ಸಾವಿಗೆ ಕಾರಣವಾದ ಮುಂಬೈ ದಾಳಿ ಮಾಸ್ಟರ್ ಮೈಂಡ್ ಗೆ ಶಿಕ್ಷೆ ಪ್ರಕಟಿಸಿದ ಪಾಕ್ ಕೋಟ್೯

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಕಾರ್ಯಕರ್ತ ಹಾಗೂ 26/11 ಮುಂಬೈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾದ ಸಾಜಿದ್ ಮಿರ್‌ಗೆ ಭಯೋತ್ಪಾದನೆ ಹಾಗೂ ಹಣಕಾಸು ಪ್ರಕರಣದಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

“ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಾರ್ಯಕರ್ತ ಸಾಜಿದ್ ಮಜೀದ್ ಮಿರ್‌ಗೆ ಲಾಹೋರ್‌ನ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ”ಎಂದು ಎಲ್ಇಟಿ ಮತ್ತು ಜಮಾತ್-ಉದ್-ದವಾ ಹಣಕಾಸು ಪ್ರಕರಣಗಳ ವಕೀಲರೊಬ್ಬರು ಪಿಟಿಐಗೆ ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಕಳೆದ ಒಂದು ದಶಕದಿಂದ ಯುಎಸ್ ಮತ್ತು ಭಾರತ ಎರಡೂ ದೇಶಗಳ ಜಂಟಿ ವಾಂಟೆಡ್ ಲಿಸ್ಟ್‌ನಲ್ಲಿರುವ ಮಿರ್ ಸತ್ತಿದ್ದಾನೆ ಎಂದು ಭಾವಿಸಲಾಗಿತ್ತು.

166 ಜನರ ಸಾವಿಗೆ ಕಾರಣವಾದ 26/11 ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಸಾಜಿದ್‌ ಮೀರ್‌ ನನ್ನು ʼಪ್ರಾಜೆಕ್ಟ್‌ ಮ್ಯಾನೇಜರ್‌ʼ ಎಂದು ಆರೋಪಿಸಲಾಗಿತ್ತು. ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಆತನ ತಲೆಯ ಮೇಲೆ 5ಮಿಲಿಯನ್‌ ಡಾಲರ್‌ ಬಹುಮಾನ ಘೋಷಿಸಲಾಗಿತ್ತು. 2005 ರಲ್ಲಿ ಆತ ನಕಲಿ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಭಾರತಕ್ಕೆ ಭೇಟಿ ನೀಡಿದ್ದ ಎಂದು ವರದಿಗಳು ಹೇಳಿದ್ದವು.

ಈ ಹಿಂದೆ, ಜೂನ್ 14-17 ರವರೆಗೆ ಬರ್ಲಿನ್‌ನಲ್ಲಿ ನಡೆದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಪ್ಲೀನರಿ ಸಭೆಯಲ್ಲಿ ಪಾಕಿಸ್ತಾನದ ಅಧಿಕಾರಿಗಳು ಸಾಜಿದ್ ಮಿರ್‌ನನ್ನು ಏಪ್ರಿಲ್‌ನಲ್ಲಿ ಬಂಧಿಸಲಾಗಿದೆ ಮತ್ತು ವಿಚಾರಣೆಯ ನಂತರ ಎಂಟು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗಿದೆ ಎಂದು ಪಾಶ್ಚಿಮಾತ್ಯ ಸಂವಾದಕರಿಗೆ ತಿಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!