Saturday, December 10, 2022

Latest Posts

ಮೈದಾನದಲ್ಲಿ ಪಂದ್ಯ ಆಡುತ್ತಲೇ ಕುಸಿದುಬಿದ್ದು ಸಾವನ್ನಪ್ಪಿದ ಪಾಕ್‌ ಕ್ರಿಕೆಟಿಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕ್ರಿಕೆಟ್ ಮೈದಾನದಲ್ಲೇ ಆಟಗಾರನೊಬ್ಬ ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯವೊಂದು ಇದ್ದಕ್ಕಿದ್ದಂತೆ ಎಲ್ಲಾ ಆಟಗಾರರಿಗೆ ಕರಾಳವಾಗಿ ಮಾರ್ಪಟ್ಟಿತು. ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಆಟಗಾರನೊಬ್ಬ ಹಠಾತ್ತನೆ ಮೈದಾನದಲ್ಲಿ ಕುಸಿದು ಬಿದ್ದು ಸ್ವಲ್ಪ ಹೊತ್ತಿನಲ್ಲೇ ಸಾವನ್ನಪ್ಪಿದ್ದಾನೆ. ಮೂಲಗಳ ಮಾಹಿತಿಯ ಪ್ರಕಾರ, ಈ ಆಟಗಾರನಿಗೆ ಪಂದ್ಯದ ವೇಳೆಯಲ್ಲೇ ಹೃದಯಾಘಾತ ಸಂಭವಿಸಿದೆ ಮತ್ತು ಆತನನ್ನು ಉಳಿಸಲು ಸಾಧ್ಯವಾಗಿಲ್ಲ. ಈ ಕ್ರಿಕೆಟಿಗನ ಸಾವು ಅಲ್ಲಿದ್ದ ಎಲ್ಲ ಆಟಗಾರರನ್ನು ದಿಗ್ಭ್ರಾಂತಗೊಳಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನ ಕಾರ್ಪೊರೇಟ್ ಲೀಗ್ ಟೂರ್ನಿಯ ಪಂದ್ಯವನ್ನು ಲಾಹೋರ್‌ನ ಪ್ರಸಿದ್ಧ ಜುಬಿಲಿ ಕ್ರಿಕೆಟ್ ಮೈದಾನದಲ್ಲಿ ಸೆ. 25 ಭಾನುವಾರದಂದು ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಬರ್ಗರ್ ಪೇಂಟ್ಸ್ ಮತ್ತು ಫ್ರೈಸ್‌ಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದವು. ಬರ್ಗರ್ ಪೇಂಟ್ಸ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಮೈದಾನದಲ್ಲಿದ್ದ ಫ್ರೈಸ್‌ಲ್ಯಾಂಡ್‌ನ ಫೀಲ್ಡರ್ ಉಸ್ಮಾನ್ ಶಿನ್ವಾರಿ ಕುಸಿದು ಬಿದ್ದಿದ್ದಾರೆ.
ಉಸ್ಮಾನ್ ಶಿನ್ವಾರಿ ಹೃದಯಾಘಾತದಿಂದ ಕುಸಿದುಬಿದ್ದಿದ್ದು ತಿಳಿಯುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ ಕರೆತರಲಾಯಿತು. ಆದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಅವರು ಬಿದ್ದು ಪ್ರಜ್ಞಾಹೀನರಾದ ದೃಶ್ಯವನ್ನು ನೋಡಿದ ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳು ಮತ್ತು ಇತರ ಫೀಲ್ಡರ್‌ಗಳು ಎಲ್ಲವನ್ನೂ ಬಿಟ್ಟು ಅವರತ್ತ ಓಡಿದರು. ಅವರನ್ನು ರಕ್ಷಿಸಲು ಯತ್ನಿಸುತ್ತಿರುವ ದೃಶ್ಯ ವೀಡಿಯೊದಲ್ಲಿ ಕಂಡುಬರುತ್ತದೆ. ಕ್ರಿಕೆಟಿಗನನ್ನು ಪ್ರಜ್ಞೆಗೆ ತರಲು ಪ್ರಯತ್ನಿಸಿದರು, ಆದರೆ ಯಶಸ್ವಿಯಾಗಲಿಲ್ಲ.
ಈ ಘಟನೆಯ ಸುದ್ದಿ ಮತ್ತು ವಿಡಿಯೋ ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದೆ. ಟೆಸ್ಟ್, ODI ಮತ್ತು T20 ಪಂದ್ಯಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿರುವ ವೇಗದ ಬೌಲರ್ ಉಸ್ಮಾನ್ ಶಿನ್ವಾರಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿಗಳು ಹರಿದಾಡಿದ್ದರಿಂದ ಪಾಕ್‌ ಕ್ರೀಡಾವಲಯದಲ್ಲಿ ಆತಂಕ ಕಾಣಿಸಿಕೊಂಡಿತ್ತು. ಆ ಬಳಿಕ ಪಾಕಿಸ್ತಾನಿ ಪತ್ರಕರ್ತರು ಇಂತಹ ಎಲ್ಲಾ ಆತಂಕಗಳು ಮತ್ತು ವದಂತಿಗಳಿಗೆ ಅಂತ್ಯ ಹಾಡಿದ್ದಾರೆ ಮತ್ತು ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!