ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಇಂದು ಭದ್ರತೆ ಕುರಿತ ಸಂಪುಟ ಸಮಿತಿ ಸಭೆ ನಡೆದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಕಾರ್ಯತಂತ್ರದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದ್ದು, 26 ಜನರನ್ನು ಬಲಿ ಪಡೆಯಲು ಕಾರಣವಾದ ಪಾಕಿಸ್ತಾನಕ್ಕೆ ಭಾರತ ತಕ್ಕ ತಿರುಗೇಟು ನೀಡಿದೆ.
ಇಂದು ನಡೆದ ಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅಟ್ಟಾರಿ ಚೆಕ್ ಪೋಸ್ಟ್ ಮುಚ್ಚಲಾಗುವುದು, ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗುವುದು, ಅಷ್ಟೇ ಅಲ್ಲದೆ ಇನ್ಮುಂದೆ ಭಾರತಕ್ಕೆ ಪಾಕಿಸ್ತಾನಿಯರಿಗೆ ಪ್ರವೇಶ ಕೂಡ ನಿಷೇಧಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.
ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಸಚಿವರು ಭಾಗವಹಿಸಿದ್ದರು.