ಹೊಸ ದಿಗಂತ ವರದಿ, ಪಾಂಡವಪುರ:
ಹಾಡ ಹಗಲೇ ಮನೆಯ ಮುಂದೆ ಮುಖ ತೊಳೆಯುತ್ತಿದ್ದ ಮಹಿಳೆಗೆ ಯುವಕನೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಪಟ್ಟಣದ ವಿಸಿ ಕಾಲೂನಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಸದ್ದಾಂ ಹುಸೇನ್ ಎಂಬವರ ಪತ್ನಿ ಲುಬ್ನಾ ಬಾನು (26) ಎಂಬ ಮಹಿಳೆಯೇ ಇರಿತಕ್ಕೆ ಒಳಗಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಂಜಾನ್ ಮಾಸಾಚರಣೆ ಪ್ರಯುಕ್ತ ಉಪವಾಸವಿದ್ದ ಲುಬ್ನಾ ಬಾನು ಮಂಗಳವಾರ ಮಧ್ಯಾಹ್ನ ವಿಸಿ ಕಾಲೂನಿಯಲ್ಲಿರುವ ತಮ್ಮ ಮನೆಯ ಮುಂಭಾಗ ಮುಖ ತೊಳೆಯುತ್ತಿದ್ದರು. ಈಕೆಯ ಪತಿ ಸದ್ದಾಂ ಹುಸೇನ್ ಮನೆಯಲ್ಲಿ ಇರಲಿಲ್ಲ. ಈ ವೇಳೆ ಯುವಕನೊಬ್ಬ ಹೊಂಚುಹಾಕಿ ಏಕಾಏಕಿ ಲುಬ್ನಾ ಅವರ ಮೇಲೆ ದಾಳಿ ನಡೆಸಿ ಹೊಟ್ಟೆಗೆ ಚಾಕುವಿನಿಂದ ಇರಿದು ಕ್ಷಣ ಮಾತ್ರದಲ್ಲಿ ಪರಾರಿಯಾದನು ಎನ್ನಲಾಗಿದೆ.
ಹೊಟ್ಟೆಗೆ ಚಾಕುವಿನಿಂದ ಇರಿದ ಪರಿಣಾಮ ಲುಬ್ನಾ ಅವರ ನೈಟಿ ಹರಿದು ಹೋಗಿ ಹೊಟ್ಟೆಗೆ ಗಾಯವಾಗಿದ್ದು, ಲುಬ್ನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಕುವಿನಿಂದ ಇರಿದ ಯುವಕ ಇದೇ ಬಡಾವಣೆಯವನಾಗಿದ್ದು, ಆತನ ಹೆಸರು ಗೊತ್ತಿಲ್ಲ. ಆದರೆ, ಆತ ಇದೇ ಕಾಲೂನಿಯ ಯುವಕರ ಜತೆ ಇರುತ್ತಾನೆ. ನಾನು ಅವನನ್ನು ಗುರುತಿಸಬಲ್ಲೆ ಎಂದು ಲುಬ್ನಾ ಹೇಳಿದರು.
ಹಳೆ ವೈಷಮ್ಯ ಕಾರಣ
ಕಳೆದ ಏಪ್ರಿಲ್ 10 ರಂದು ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಇದೇ ಬಡಾವಣೆಯ ಕೆಲವು ಯುವಕರು ಸದ್ದಾಂ ಹುಸೇನ್ ಅವರ ಮನೆಗೆ ನುಗ್ಗಿ ಸದ್ದಾಗೆ ಚೂರಿಯಿಂದ ಇರಿದು ಅವರ ಪತ್ನಿ ಲುಬ್ನಾ ಅವರಿಗೆ ಹೊಡೆದು ಗಾಯಗೊಳಿಸಿದ್ದರು. ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತಾದರೂ, ಶಾಸಕರು ಮಧ್ಯ ಪ್ರವೇಶದಿಂದ ರಾಜಿ ಮಾಡಿಸಲಾಗಿತ್ತು.
ಬಂದೋವಸ್ಥೆಗೆ ಮನವಿ : ವಿಸಿ ಕಾಲೂನಿಲ್ಲಿ ಆಗಿಂದ್ದಾಗ್ಗೆ ಇಂತಹ ದುರ್ಘಟನೆಗಳು ನಡೆಯುತ್ತಿವೆ. ಇಲ್ಲಿ ಸುಮಾರು 25 ಮುಸ್ಲಿಂ ಕುಟುಂಬಗಳು ವಾಸವಾಗಿದ್ದು, ಸೂಕ್ತ ಪೊಲೀಸ್ ಬಂದೂಬಸ್ತ್ ವ್ಯವಸ್ಥೆ ಮಾಡಬೇಕೆಂದು ನಿವಾಸಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.