ಹೊಸದಿಗಂತ ವರದಿ, ಧಾರವಾಡ:
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ 31ನೇ ಫ್ಯಾರಾ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಧಾರವಾಡ ಜಿಲ್ಲೆಯ ದಿವ್ಯಾಂಗ ಕ್ರೀಡಾಪಟಗಳು, ಬಂಗಾರ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕರ್ನಾಟಕ ರಾಜ್ಯ ಕ್ರೀಡಾ ಸಂಸ್ಥೆ ಆಯೋಜಿಸಿದ ಅಥ್ಲೆಟಿಕ್ಸ್ ಚಾಂಪಿಯನಶಿಫ್ನಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಸದಸ್ಯರಾದ ಮಹೇಶ ಮಹಾದೇವಪ್ಪ ಗೂಳಪ್ಪನವರ ಹಾಗೂ ಬಸವರಾಜ ಉಪ್ಪಾರ ಧಾರವಾಡ ಜಿಲ್ಲೆಯಿಂದ ಭಾಗವಹಿಸಿದ್ದರು.
ಪುರುಷರ ಎಫ್-53 ಕೆಜಿ ವಿಭಾಗದಲ್ಲಿ ಬಸವರಾಜ ಉಪ್ಪಾರ ಬಲ್ಲೆ ಎಸೆತದಲ್ಲಿ ಬಂಗಾರ ಹಾಗೂ ಗುಂಡು ಎಸೆತದಲ್ಲಿ ಕಂಚು, ಮಹೇಶ ಮಹಾದೇವಪ್ಪ ಗೂಳಪ್ಪನವರ ಬೆಲ್ಲೆ ಎಸೆತದಲ್ಲಿ ಬೆಳ್ಳಿ, ಚಕ್ರ ಎಸೆತದಲ್ಲಿ ಕಂಚಿನ ಪದಕಕ್ಕೆ ಕೊರಳು ಒಡ್ಡಿದ್ದಾರೆ.
ಮಹೇಶ ಗೂಳಪ್ಪನವರ ಎರಡು ಕಾಲು ಬಲಹೀನವಾಗಿವೆ. ಮೂಲತಃ ಕೃಷಿ ಕುಟುಂಬದ ಇತನು, ಸ್ವತಃ ನಾಲ್ಕು ಆಕಳು ಸಾಕಾಣಿಕೆ ಮಾಡಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು, ಸ್ವಾವಲಂಭಿ ಜೀವನದ ಮೂಲಕ ದಿವ್ಯಾಂಗರಿಗೆ ಮಾದರಿಯಾಗಿದ್ದಾನೆ.
ಬಸವರಾಜ ಉಪ್ಪಾರ ರೈಲ್ವೆ ಉದ್ಯೋಗಿ. ಇತನಿಗೂ ಎರಡು ಕಾಲುಗಳಿಲ್ಲ. ಸ್ಪರ್ಧೆಯಲ್ಲಿ ಬಂಗಾರದ ಸಾಧನೆಯ ಮೂಲಕ ಗೋವನಕೊಪ್ಪ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ. ಸಾಧನೆ ಮಾಡಿದ ಕ್ರೀಡಾಪಟಗಳನ್ನು ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಎನ್.ಮೂಲಮನಿ, ತರಬೇತುದಾರ ಮಹ್ಮದಗೌಸ ಕಳಸಾಪೂರ, ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಅಧ್ಯಕ್ಷ ಕೇಶವ ತೆಲಗು, ಮಂಗಳಾ ಬೆಟಗೇರಿ ಅಭಿನಂದಿಸಿದ್ದಾರೆ.