spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ಯಾರಾಲಿಂಪಿಕ್ಸ್ ಅಪ್ರತಿಮ ಸಾಧನೆ ಹಿಂದಿರುವುದು ‘ಟಾಪ್ಸ್’ ಎಂಬ ಮಹಾಮಂತ್ರ!

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತದ ಟೋಕಿಯೋ ಪ್ಯಾರಾಲಿಂಪಿಕ್ಸ್ ಸಾಧನೆಯನ್ನು ಹಿಡಿದಿಡುವುದಕ್ಕೆ ಒಂದು ಅಂಕಿಅಂಶ ಸಾಕು. ಈವರೆಗಿನ ಪ್ಯಾರಾಲಿಂಪಿಕ್ಸ್ ಪಂದ್ಯಗಳಿಂದ ಭಾರತ ಸಂಪಾದಿಸಿರುವ ಪದಕಗಳು 12. ಆದರೆ, ಈ ಬಾರಿಯ ಕ್ರೀಡಾಕೂಟವೊಂದರಲ್ಲೇ ಬಂದಿರುವ ಪದಕಗಳು 19.

ಹೀಗೆ ಭಾರತವು ಪ್ಯಾರಾಲಿಂಪಿಕ್ಸ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡುವುದಕ್ಕೆ ಕಾರಣವೇನು? ಆಟಗಾರರ ಶ್ರಮ ಮತ್ತು ಪ್ರತಿಭೆ ಎಂಬ ಉತ್ತರವೇನೋ ಸರಿ. ಆದರೆ ಅಂಥ ಪರಿಶ್ರಮ ಆಟಗಾರರ ವೈಯಕ್ತಿಕ ನೆಲೆಯಲ್ಲಿ ಈ ಹಿಂದೆಯೂ ಇತ್ತು. ಆದರೆ ಕ್ರೀಡಾವ್ಯವಸ್ಥೆಯ ಮಟ್ಟದಲ್ಲಿ ಸರ್ಕಾರ ಮಾಡಿರುವ ಸುಧಾರಣೆಗಳೇ ಈ ಮಟ್ಟದ ಪದಕಗಳ ಬೇಟೆಗೆ ಕಾರಣ ಎಂಬುದು ಈಗ ಯಾರೂ ನಿರಾಕರಿಸಲಾಗದ ಸಂಗತಿಯಾಗಿ ಉಳಿದಿದೆ.

ಟಾಪ್ಸ್ ಎಂಬ ಸಕಲವಿಧ ಪ್ರೋತ್ಸಾಹ ಯೋಜನೆ

ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ (ಟಾಪ್ಸ್) ಎಂಬುದು ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಕ್ಕೆ ಮೋದಿ ಸರ್ಕಾರ ತಂದ ಯೋಜನೆ. 2014ರ ಸೆಪ್ಟೆಂಬರಿನಲ್ಲೇ ಈ ಯೋಜನೆ ಜಾರಿಗೆ ಬಂತಾದರೂ ಇದರ ಅನುಷ್ಠಾನದ ಹಾದಿಗಳು ಸ್ಪಷ್ಟವಾಗುವುದರಲ್ಲೇ 2016ರ ಒಲಿಂಪಿಕ್ಸ್ ಬಂದಿದ್ದರಿಂದ ಅಲ್ಲಿ ಅದರ ಪರಿಣಾಮ ಅನಾವರಣವಾಗಿರಲಿಲ್ಲ. ಹೀಗಾಗಿ ಇದು ಕೇವಲ ಕೇಳಲು ಆಕರ್ಷಕವಾಗಿರುವ ಯೋಜನೆ ಅಂತ ಎಲ್ಲರೂ ಅದನ್ನು ನಿರ್ಲಕ್ಷಿಸಿಬಿಟ್ಟಿದ್ದರು. ಆದರೆ ಈ ಬಾರಿ ತನ್ನ ಪರಿಣಾಮವನ್ನಿದು ಮೊಗೆ  ಮೊಗೆದು ಕೊಟ್ಟಿದೆ.

ಟಾಪ್ಸ್ ಯೋಜನೆಗೆ ಆಯ್ಕೆಯಾದ ಕ್ರೀಡಾಳುಗಳಿಗೆ ಸರ್ವವಿಧದ ಪ್ರೋತ್ಸಾಹ ಸರ್ಕಾರದ ಕಡೆಯಿಂದ ಸಿಗುತ್ತದೆ. 

  • ಟಾಪ್ಸ್ ಯೋಜನೆ ಅಡಿ ಆಯ್ಕೆಯಾದವರಿಗೆ ತಿಂಗಳಿಗೆ ₹50,000 ಮಾಸಿಕ ಪ್ರೋತ್ಸಾಹಧನ ದೊರೆಯುತ್ತದೆ.
  • ವಿದೇಶದಲ್ಲಿ ಅಭ್ಯಾಸ, ಅಂಗ ವೈಕಲ್ಯವನ್ನು ಮೀರುವುದಕ್ಕೆ ಬಳಸುವ ಸಲಕರಣೆಗಳು ಇವೆಲ್ಲವಕ್ಕೂ ಧನ ಸಹಾಯವೂ ಸಿಗುತ್ತದೆ.
  • ಟಾಪ್ಸ್ ಗೆ ಆಯ್ಕೆಯಾದ ಕ್ರೀಡಾಳುಗಳಿಗೆ ಕಾಲ-ಕಾಲಕ್ಕೆ ಸಾಮರ್ಥ್ಯ ಪರೀಕ್ಷೆಗಳಿರುತ್ತವೆ. ಇದರಲ್ಲಿ ವಿಫಲರಾದವರನ್ನು ಹೊರಗಿಟ್ಟು ಹೊಸಬರಿಗೆ ಅವಕಾಶ ಕೊಡಲಾಗುತ್ತದೆ.
  • ಅಥ್ಲೆಟಿಕ್, ಹಾಕಿ, ಬ್ಯಾಡ್ಮಿಂಟನ್, ಕುಸ್ತಿ ಸೇರಿದಂತೆ ಹಲವು ಕ್ರೀಡೆಗಳನ್ನು ಆದ್ಯತೆಯಾಗಿ ಗುರುತಿಸಲಾಗಿದ್ದು, ಈ ವಿಭಾಗಗಳಲ್ಲಿ ಆಯ್ಕೆಯಾದವರ ಸಂಪೂರ್ಣ ಖರ್ಚುಗಳನ್ನು ಸರ್ಕಾರ ನೋಡಿಕೊಳ್ಳುತ್ತದೆ.

ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಸೇರಿ ಈವರೆಗೆ ₹756 ಕೋಟಿಯನ್ನು ಈವರೆಗೆ ವ್ಯಯಿಸಲಾಗಿದೆ. ಅಂದಹಾಗೆ, ಈ ಬಾರಿ ಪ್ಯಾರಾಲಿಂಪಿಕ್ಸ್ ಗೆ ಭಾರತವನ್ನು ಪ್ರತಿನಿಧಿಸಿದ ಎಲ್ಲ 54 ಕ್ರೀಡಾಳುಗಳಿಗೆ ಟಾಪ್ಸ್ ಯೋಜನೆ ಸಹಕರಿಸಿತ್ತು.

ಪದಕವೀರ ಶರದ್ ಕುಮಾರ್ ಹೇಳಿದ ಕತೆ

ಎತ್ತರ ಜಿಗಿತದಲ್ಲಿ ಕಂಚಿನ ಪದಕ ತಂದ ಪ್ಯಾರಾಲಿಂಪಿಕ್ಸ್ ಪಟು ಶರದ್ ಕುಮಾರ್ ಅವರು ಸರ್ಕಾರಿ ವ್ಯವಸ್ಥೆಯಲ್ಲಿ ಬದಲಾಗಿರುವುದೇನು ಎಂಬುದರ ಬಗ್ಗೆ ಟೈಮ್ಸ್ ನೌ ಸುದ್ದಿವಾಹಿನಿ ಜತೆಗಿನ ಮಾತುಕತೆಯಲ್ಲಿ ಸೊಗಸಾಗಿ ವಿವರಿಸಿದ್ದಾರೆ.

ಅವರು ಹೇಳುವ ಪ್ರಕಾರ, ಹಿಂದೆಲ್ಲ ಪ್ಯಾರಾಲಿಂಪಿಕ್ಸ್ ಸಿದ್ಧತೆಗೆ ಕ್ರೀಡಾಳುವೇ ತನ್ನ ಖರ್ಚು ಹೊಂದಿಸಿಕೊಳ್ಳಬೇಕಾದ ಸ್ಥಿತಿ ಇತ್ತು. ಉದಾಹರಣೆಗೆ, ಒಬ್ಬ ಕ್ರೀಡಾಳು ಓಟಕ್ಕೆ ತಕ್ಕನಾದ ಕೃತಕ ಕಾಲು ಅಳವಡಿಸಿಕೊಳ್ಳಬೇಕೆಂದರೆ ಅದಕ್ಕೆ ಆರೇಳು ಲಕ್ಷ ರುಪಾಯಿಗಳು ತಗಲುತ್ತಿದ್ದವು. ಆದರೆ ಇವತ್ತು ಸರ್ಕಾರ ಅವೆಲ್ಲವನ್ನೂ ತಾನು ನೋಡಿಕೊಳ್ಳುತ್ತಿದೆ. ಶರದ್ ಅವರು ತಮ್ಮ ಅನುಭವದ ಪ್ರಕಾರ ವಿವರಿಸಿರುವಂತೆ, “ನನಗೆ ಇಂಥದೊಂದು ಉಪಕರಣ ಬೇಕು ಎಂದಾಗ ಅದಕ್ಕೆ ಸಂಬಂಧಿಸಿದ ಸಮಿತಿ ನನ್ನ ಪ್ರಸ್ತಾವವನ್ನು ಕೂಲಂಕಷವಾಗಿ ಪರಿಶೀಲಿಸಿ, ಆ ಉಪಕರಣ ಎಷ್ಟು ಮುಖ್ಯ, ಅದು ಹೇಗೆ ಕ್ಷಮತೆ ಹೆಚ್ಚಿಸುತ್ತದೆ ಎಂದೆಲ್ಲ ತಿಳಿದುಕೊಂಡು ತಕ್ಷಣ ಅದಕ್ಕೆ ವ್ಯವಸ್ಥೆ ಮಾಡಿತು. ಪ್ರತಿ ಪ್ರಸ್ತಾವವನ್ನೂ ನಿಯಮಬದ್ಧವಾಗಿ, ತಾರ್ಕಿಕವಾಗಿ ಪರಿಶೀಲಿಸಿ ಮಾನ್ಯ ಮಾಡಲಾಗುತ್ತಿದೆ” ಎಂದು ಶರದ್ ಸಂತಸ ಹಂಚಿಕೊಂಡಿದ್ದಾರೆ.

ಇವತ್ತು ಭವೀನಾ ಪಟೇಲ್ ಎಂಬ ಪ್ರತಿಭೆ ಟೇಬಲ್ ಟೆನ್ನಿಸ್ ಆಟದಲ್ಲಿ ನಿರೀಕ್ಷೆ ಇಲ್ಲದೇ ಪದಕ ತಂದಿದ್ದರೆ ಅದಕ್ಕೆ ಕಾರಣ ಅವರಿಗೆ ಟಾಪ್ಸ್ ಅಡಿಯಲ್ಲಿ ಆಹಾರತಜ್ಞರು, ಅಭ್ಯಾಸ ಗುರುಗಳು ಎಲ್ಲರನ್ನೂ ತಮಗೆ ತಕ್ಕಂತೆ ನೇಮಿಸಿಕೊಳ್ಳುವ ಅವಕಾಶ ದೊರೆತಿದ್ದು. ಅಲ್ಲದೇ ಅವರ ಆಟಕ್ಕೆ ಸಂಬಂಧಿಸಿದ ಎಲ್ಲ ಪರಿಕರಗಳ ವೆಚ್ಚವನ್ನೂ ಸರ್ಕಾರದಿಂದ ಭರಿಸಲಾಗಿತ್ತು. ಭವೀನಾ ಒಂದು ಉದಾಹರಣೆ. ಇದೇ ಪ್ರೋತ್ಸಾಹ ಎಲ್ಲರಿಗೂ ಸಿಕ್ಕಿದೆ. 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss