ಹೊಸ ದಿಗಂತ ವರದಿ, ಚಿತ್ರದುರ್ಗ:
ರಾಜ್ಯವನ್ನು 2025 ರೊಳಗೆ ಕ್ಷಯ ಮುಕ್ತ ರಾಜ್ಯ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳ ತಂಡವು ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮದಡಿಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಚಟುವಟಿಕೆಗಳ ಕುರಿತು ಮನೆ, ಮನೆ ಭೇಟಿ ನೀಡಿ ಮಾಹಿತಿ ನೀಡಿತು.
ಜಿಲ್ಲೆಯ್ಯಾದ್ಯಂತ ಸಕ್ರಿಯ ಕ್ಷಯ ರೋಗಪತ್ತೆ ಆಂದೋಲನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮನೆ, ಮನೆ ಭೇಟಿಗೆ ಬರುವ ಆಶಾ ಕಾರ್ಯಕರ್ತೆಯರು ನಿಮ್ಮ ಜೊತೆ ಸಮಾಲೋಚನೆ ನಡೆಸುತ್ತಾರೆ. ವಿಶೇಷವಾಗಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದ ಸಮೀಕ್ಷೆ ನಡೆಸುವಾಗ ಮಾಹಿತಿ ಒದಗಿಸಿ, ಸಾಮಾನ್ಯ ಕ್ಷಯರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಫ ಪರೀಕ್ಷೆ ಮಾಡಿಸಬೇಕು. ಇದರಿಂದ ಶೀಘ್ರ ರೋಗ ಪತ್ತೆ ಮಾಡಿ ಉಚಿತವಾಗಿ ಚಿಕಿತ್ಸೆಯನ್ನು ಮನೆ ಬಾಗಿಲಿಗೆ ನೀಡಲಾಗುತ್ತದೆ ಎಂದರು.
ಜಿಲ್ಲಾ ಕ್ಷಯರೋಗ ವಿಭಾಗದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಾರುತಿಪ್ರಸಾದ್ ಮಾತನಾಡಿ, ಕ್ಷಯರೋಗದ ಪ್ರಾರಂಭಿಕ ಲಕ್ಷಣಗಳಾದ ಕೆಮ್ಮು, ಜ್ವರ, ಹಸಿವಾಗದಿರುವಿಕೆ, ತೂಕ ಕಡಿಮೆಯಾವುದು, ಕೆಮ್ಮಿದಾಗ ರಕ್ತ ಬರುವುದು ಸಾಮಾನ್ಯ ಲಕ್ಷಣಗಳಾಗಿವೆ. ಕ್ಷಯರೋಗ ಚಿಕಿತ್ಸೆ ಮತ್ತು ಕ್ಷಯ ರೋಗಿಗೆ ಚಿಕಿತ್ಸಾ ಅವಧಿಯಲ್ಲಿ ಪೋಷಕಾಂಶಗಳ ಆಹಾರ ಸೇವಿಸಲು ದೊರೆಯುವ ಆರ್ಥಿಕ ಸವಲತ್ತು (ಪ್ರತಿ ಮಾಹೆ 500 ರೂ. ಚಿಕಿತ್ಸಾ ಅವಧಿ ಮುಗಿಯುವ ತನಕ) ಹೇಗೆ ಪಡೆದುಕೊಳ್ಳಬೇಕು ಎಂಬುದನ್ನು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಕೋವಿಡ್ ಲಸಿಕೆ ಪಡೆದು ಕೊಳ್ಳುವ ಬಗ್ಗೆ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಕೈಗಳ ಸ್ವಚ್ಚತೆ ಮತ್ತು ಕೋವಿಡ್ ಲಸಿಕಾ ಮೇಳದ ಬಗ್ಗೆ ತಿಳಿಸಿದರು. ಗ್ರಾಮದ ವಿವಿಧ ಮುಖಂಡರು, ಮಹಿಳೆಯರು ಹಾಗೂ ಮಕ್ಕಳು ಈ ಸಂದರ್ಭದಲ್ಲಿ ಹಾಜರಿದ್ದರು.