ಹದಿಹರೆಯದ ವಯಸ್ಸಿನಲ್ಲಿ ಮಕ್ಕಳ ವಿಚಾರವಾಗಿ ಪೋಷಕರು ಸಾಕಷ್ಟು ಜಾಗರೂಕರಾಗಿರಬೇಕು. ಈ ವಯಸ್ಸಿನ ಮಕ್ಕಳು ಎದುರಿಸುವ ಸಾಮಾನ್ಯ ಒತ್ತಡಗಳನ್ನು ಹೆತ್ತವರು ಅರ್ಥಮಾಡಿಕೊಳ್ಳಬೇಕು. ಅವರಿಗೆ ಅನಗತ್ಯ ಒತ್ತಡ ಉಂಟುಮಾಡುವ ಕೆಲವೊಂದು ಸಾಮಾನ್ಯ ಅಂಶಗಳಿವೆ. ಅವುಗಳನ್ನು ಅರಿತು ಪರಿಹರಿಸುವ ಕುರಿತು ಹೆತ್ತವರು ಯೋಚನೆ ಮಾಡಬೇಕು.
ಅತಿಯಾದ ಸ್ಕ್ರೀನಿಂಗ್
ಹೆಚ್ಚು ಸಮಯ ಸ್ಕ್ರೀನಿಂಗ್‌ನಲ್ಲಿ ಕಳೆಯುವುದು ಮತ್ತು ಸಾಮಾಜಿಕ ಮಾಧ್ಯಮ ಬಳಕೆಯು ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆನ್‌ಲೈನ್‌ನಲ್ಲಿ ನೋಡುವ ವಿಷಯಗಳು ಅವರಿಗೆ ಗೊತ್ತಿಲ್ಲದಂತೆ ಆತಂಕ ಹೆಚ್ಚಿಸಬಹುದು.
ಶೈಕ್ಷಣಿಕ ಒತ್ತಡ
ಹದಿಹರೆಯದವರು ತಮ್ಮ ಪೋಷಕರು, ಶಿಕ್ಷಕರು ಹಾಗೂ ಗೆಳೆಯರಿಂದ ಕೂಡಾ ಸಾಕಷ್ಟು ಶೈಕ್ಷಣಿಕ ಒತ್ತಡ ಎದುರಿಸುತ್ತಾರೆ. ಪೋಷಕರು ಹಾಗೂ ಶಿಕ್ಷಕರಿಗೆ ಮಕ್ಕಳ ಮೇಲಿನ ನಿರೀಕ್ಷೆಗಳು ಈ ಒತ್ತಡ ಉಂಟು ಮಾಡುತ್ತವೆ. ಇದು ಅವರ ಮಾನಸಿಕ ಆರೋಗ್ಯ ಮತ್ತು ಶೈಕ್ಷಣಿಕ ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಕೌಟುಂಬಿಕ ಕಲಹಗಳು
ಮನೆಯೊಳಗಿನ ಕೌಟುಂಬಿಕ ಕಲಹಗಳು, ಭಿನ್ನಾಭಿಪ್ರಾಯಗಳು ಹದಿಹರೆಯದವರಿಗೆ ಒತ್ತಡದ ವಾತಾವರಣವನ್ನು ಸೃಷ್ಟಿಸಬಹುದು. ತಂದೆ ತಾಯಿಯ ನಡುವಣ ಜಗಳ, ಉದ್ವೇಗದ ಮಾತುಕತೆ ಮಕ್ಕಳಿಗೆ ಕಿರಕಿರಿಯಾಗಬಹುದು.
ಸಾಮಾಜಿಕ ಒತ್ತಡದ ಬಗ್ಗೆ ಗಮವಿರಲಿ
ಸಮಾಜ ಹಾಗೂ ಜನರ ಜೊತೆ ಬೆರೆಯುವುದು, ಹೊಂದಿಕೊಳ್ಳುವುದು, ಗೆಳೆಯರ ಒತ್ತಡವನ್ನು ನಿಭಾಯಿಸುವುದು ಕೂಡಾ ಮಕ್ಕಳಿಗೆ ಸವಾಲಾಗುತ್ತದೆ. ಆಗಾಗ ಗದರುವುದು, ಬೆದರಿಸುವುದು ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು.
ಮಿತಿಮೀರಿದ ಪಠ್ಯೇತರ ಚಟುವಟಿಕೆ ನೀಡದಿರಿ
ಹದಿಹರೆಯದ ಮಕ್ಕಳಿಗೆ ಪಠ್ಯ ಚಟುವಟಿಕೆಗಳು ಇದ್ದೇ ಇರುತ್ತದೆ. ಇದರ ನಡುವೆ ಸಂಗೀತ, ನೃತ್ಯ ಎಂದು ಹತ್ತು ಹಲವು ಹೆಚ್ಚುವರಿ ತರಗತಿಗಳಿಗೆ ಸೇರಿಸಿದರೆ ಅವರಿಗೆ ಸಹಜವಾಗಿ ಒತ್ತಡ ಹೆಚ್ಚುತ್ತದೆ.