ಪೋಷಕರೇ ಹುಷಾರು, ಈ ಟೊಮೆಟೋ ಜ್ವರದ ವೈರಸ್‌ಗೆ ಮಕ್ಕಳೇ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಸಾಂಕ್ರಾಮಿಕ, ಮಂಕಿಪಾಕ್ಸ್ ಭೀತಿ ಬಳಿಕ ಇದೀಗ ಭಾರತದಲ್ಲಿ ಟೊಮೆಟೊ ಜ್ವರದ ಪ್ರಕರಣಗಳು ಹೆಚ್ಚಾಗಿವೆ. ಮೇ 6ರಂದು ಕೇರಳದಲ್ಲಿ ಟೊಮೆಟೊ ಜ್ವರದ ವೈರಸ್ ಮೊದಲ ಬಾರಿಗೆ ಪತ್ತೆಯಾಗಿತ್ತು. ಅದಾದ ಬಳಿಕ ಭಾರತದಲ್ಲಿ ಟೊಮೆಟೊಜ್ವರದ 82 ಪ್ರಕರಣಗಳು ದಾಖಲಾಗಿವೆ. ಅಧ್ಯಯನದ ಪ್ರಕಾರ, ಹೆಚ್ಚಾಗಿ 1ರಿಂದ 5 ವರ್ಷದ ಮಕ್ಕಳಲ್ಲಿ ಈ ಟೊಮೆಟೊ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸಾಂಕ್ರಾಮಿಕ ರೋಗವು ಕೈ, ಕಾಲು ಮತ್ತು ಬಾಯಿ ಕಾಯಿಲೆಯ ಹೊಸ ರೂಪಾಂತರವಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.

ಎಲ್ಲಿ ಪತ್ತೆಯಾಯಿತು ಈ ವೈರಸ್?

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮೇ 6 ರಂದು ವೈರಸ್ ಮೊದಲು ಪತ್ತೆಯಾಗಿದ್ದು ಜುಲೈ 26 ರಂದು ಕೊನೆಯ ಪ್ರಕರಣ ಕಂಡುಬಂದಿದೆ. ಕೇರಳದ ಇತರ ಮೂರು ಭಾಗಗಳಾದ ಅಂಚಲ್, ಅರ್ಯಾನ್‌ಕಾವು, ನೆಡುವತ್ತೂರ್‌ನಲ್ಲೂ ರೋಗ ಹಬ್ಬಿತ್ತು ಮತ್ತು ಈಶಾನ್ಯ ರಾಜ್ಯ ಒಡಿಶಾದಲ್ಲಿ 1ರಿಂದ 9 ವರ್ಷ ವಯಸ್ಸಿನ 26 ಮಕ್ಕಳಿಗೆ ಸೋಂಕು ತಗುಲಿದೆ.

ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಟೊಮೆಟೊ ಫ್ಲೂ ಕುರಿತು ವೈದ್ಯರು ಎಚ್ಚರಿಸಿದ್ದಾರೆ. ಇದು ಕಾಲು ಬಾಯಿ ರೋಗದ ಹೊಸ ರೂಪಾಂತರವಾಗಿದೆ ಎಂಬ ಭೀತಿಯನ್ನು ಸೃಷ್ಟಿಸಿದೆ. ಸೊಳ್ಳೆಯಿಂದ ಹರಡುವ ಸೋಂಕಿನ ನಂತರದ ಪರಿಣಾಮ ಇದಾಗಿದೆಯೇ ಎಂಬುದನ್ನು ತಜ್ಞರು ಕಂಡುಹಿಡಿಯುತ್ತಿದ್ದು ಅವರು ಸಂಪೂರ್ಣ ವಾಗಿ ಹೊಸ ರೋಗಕಾರಕವನ್ನು ಕುರಿತ ಮಾಹಿತಿಯನ್ನು ತಳ್ಳಿಹಾಕಿಲ್ಲ. ಮೇ ತಿಂಗಳಿನಿಂದ ಇಲ್ಲಿಯವರೆಗೆ ಐದರ ಹರೆಯದ 82 ಮಕ್ಕಳು ಜ್ವರದಿಂದ ಬಳಲುತ್ತಿದ್ದು 10ರ ಹರೆಯದವರೆಗಿನ 26 ಎಳೆಯರಲ್ಲೂ ಶಂಕಿತ ಪ್ರಕರಣಗಳು ಕಂಡುಬಂದಿದೆ.

ಟೊಮೆಟೊ ಎಂಬ ಹೆಸರೇಕೆ?
ದೇಹದಲ್ಲಿ ಕೆಂಪು ಬಣ್ಣದ ನೋವಿರುವ ಗುಳ್ಳೆಗಳು ಕಂಡುಬರುತ್ತದೆ ಮತ್ತು ಇದು ಕ್ರಮೇಣ ಟೊಮೆಟೊಗಾತ್ರಕ್ಕೆ ಹಿಗ್ಗುತ್ತದೆ. ಹಾಗಾಗಿಯೇ ಈ ಜ್ವರವನ್ನು ಟೊಮೆಟೊಜ್ವರ ಎಂದು ಕರೆಯಲಾಗಿದೆ. ರೋಗಿಗಳು ಹೆಚ್ಚು ಜ್ವರ ಮತ್ತು ಕೀಲು ನೋವಿನಿಂದ ಬಳಲುತ್ತಿದ್ದು ಆಯಾಸ, ಅನಾರೋಗ್ಯ ಮತ್ತು ಅತಿಸಾರ ಕಂಡುಬಂದಿದೆ. ಇದು ಹೆಚ್ಚು ಸಾಂಕ್ರಾಮಿಕ ಎಂಬುದಾಗಿ ವೈದ್ಯರು ತಿಳಿಸಿದ್ದು ಇದನ್ನು ನಿಯಂತ್ರಣಕ್ಕೆ ತರದೇ ಇದ್ದರೆ ವಯಸ್ಕರಲ್ಲೂ ಈ ರೋಗ ಕಂಡುಬರಬಹುದು ಎಂಬುದಾಗಿ ಎಚ್ಚರಿಸಿದ್ದಾರೆ.

ರೋಗಲಕ್ಷಣಗಳು ಯಾವುವು?
ಟೊಮೆಟೊ ಜ್ವರ ಹೊಂದಿರುವ ಮಕ್ಕಳಲ್ಲಿ ಕಂಡುಬರುವ ಪ್ರಾಥಮಿಕ ರೋಗಲಕ್ಷಣಗಳು ಚಿಕೂನ್ ಗುನ್ಯಾದಂತೆಯೇ ಇರುತ್ತವೆ. ತೀವ್ರ ಜ್ವರ, ದದ್ದುಗಳು ಮತ್ತು ಕೀಲುಗಳಲ್ಲಿ ನೋವು, ಸುಸ್ತು ಇದರ ಲಕ್ಷಣಗಳಾಗಿವೆ. ಮೈಕೈ ನೋವು, ಜ್ವರ ಮತ್ತು ಆಯಾಸದಂತಹ ಕೆಲವು ರೋಗಲಕ್ಷಣಗಳು ಕೋವಿಡ್ -19 ರೋಗಿಗಳು ಅನುಭವಿಸಿದಂತೆಯೇ ಇರುತ್ತವೆ. ಇತರ ರೋಗಲಕ್ಷಣಗಳೆಂದರೆ ಕೀಲು ಊತ, ವಾಕರಿಕೆ, ಅತಿಸಾರ, ನಿರ್ಜಲೀಕರಣ, ಕೀಲು ನೋವು ಮತ್ತು ಅಧಿಕ ಜ್ವರ. ಕೆಲವು ಸಂದರ್ಭಗಳಲ್ಲಿ ರೋಗಿಗಳ ಚರ್ಮದ ಮೇಲೆ ದದ್ದುಗಳು ಕೂಡ ಉಂಟಾಗುತ್ತವೆ. ಆಯಾಸ, ವಾಕರಿಕೆ, ವಾಂತಿ, ಅತಿಸಾರ, ಜ್ವರ, ನಿರ್ಜಲೀಕರಣ, ಕೀಲುಗಳ ಊತ, ದೇಹದ ನೋವು ರೀತಿಯ ರೋಗಲಕ್ಷಣಗಳು ಡೆಂಗ್ಯೂನಲ್ಲಿ ಕಂಡುಬರುವ ಲಕ್ಷಣಗಳನ್ನು ಹೋಲುತ್ತವೆ ಎಂದು ಅಧ್ಯಯನ ತಿಳಿಸಿದೆ.

ಜ್ವರ ಕಂಡುಬಂದರೆ ಏನು ಮಾಡಬೇಕು?
ರೋಗಲಕ್ಷಣ ಕಂಡುಬಂದ ದಿನದಿಂದ ಎಲ್ಲಾ ರೋಗಿಗಳನ್ನು 5ರಿಂದ 7 ದಿನಗಳವರೆಗೆ ಪ್ರತ್ಯೇಕಿಸಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಅಂತೆಯೇ ಹೆಚ್ಚು ಪ್ರಮಾಣದಲ್ಲಿ ದ್ರವಾಹಾರಗಳನ್ನು ಸೇವಿಸಬೇಕು ಮತ್ತು ಪ್ಯಾರಸಿಟಮಲ್ ಅನ್ನು ತೆಗೆದುಕೊಳ್ಳಬೇಕು. ಕೆಂಪು ಗುಳ್ಳೆಗಳಿಂದ ಉಂಟಾಗುವ ಉರಿ ನೋವನ್ನು ಕಡಿಮೆ ಮಾಡಲು ಬೆಚ್ಚಗಿನ ನೀರಿನಲ್ಲಿ ಅದ್ದಿದ ಸ್ಪಾಂಜ್‌ನಿಂದ ಆರೈಕೆ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!