ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಮನೆಗೆ ಕರೆದೊಯ್ದ ಪೋಷಕರು

ಹೊಸದಿಗಂತ ವರದಿ,ಸುಂಟಿಕೊಪ್ಪ:

ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿಗೆ ಬುಧವಾರ 5 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪ್ರವೇಶಿಸಿದ್ದು ಪ್ರಾಂಶುಪಾಲರು, ಅಧ್ಯಾಪಕರುಗಳು ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಹೈಕೋರ್ಟಿನ ಮಧ್ಯಂತರ ಆದೇಶ ಹಾಗೂ ಸರಕಾರ ಆದೇಶದ ಬಗ್ಗೆ ತಿಳಿಹೇಳಿದರಲ್ಲದೆ, ಪೋಷಕರನ್ನು ಕರೆಸಿ ಮಾತುಕತೆ ನಡೆಸಿದರು.
ಹೈಕೋರ್ಟ್ ತೀರ್ಪು ಬಂದ ನಂತರ ಕಾಲೇಜಿಗೆ ಕಳುಹಿಸುವುದಾಗಿ ಪೋಷಕರು ವಿದ್ಯಾರ್ಥಿನಿಯರನ್ನು ಮನೆಗೆ ಕರೆದೊಯ್ದರು.
ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬುಧವಾರ ತರಗತಿ ಆರಂಭವಾದಾಗ 108 ವಿದ್ಯಾರ್ಥಿಗಳು ಗೈರಾಗಿದ್ದು, 92 ಮಂದಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರು. 28 ಮಂದಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿದ್ದು, ಈ ಪೈಕಿ 5 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಾಗ ಪೊಲೀಸರು ಅವರನ್ನು ತಡೆದರು.
ಪ್ರಾಚಾರ್ಯ ಜಾನ್ ಹಾಗೂ ಅಧ್ಯಾಪಕರುಗಳು ಆ ಮಕ್ಕಳನ್ನು ಪ್ರತ್ಯೇಕ ಕೊಠಡಿಗೆ ಕರೆಸಿಕೊಂಡು ಸರಕಾರದ, ಹೈಕೋರ್ಟಿನ ನಿಯಮ ನಾವು ಪಾಲಿಸಬೇಕು. ಕಾಲೇಜಿನ ಹೊರಗೆ ನೀವು ಅದನ್ನು ಧರಿಸಿಕೊಳ್ಳಿ.ಆದರೆ ತರಗತಿಯಲ್ಲಿ ಧರಿಸದಿರುವಂತೆ ತಿಳಿ ಹೇಳಿದರಾದರೂ, ವಿದ್ಯಾರ್ಥಿನಿಯರು ಇದಕ್ಕೆ ಒಪ್ಪಲಿಲ್ಲ.
ಕೊನೆಗೆ ಪ್ರಾಂಶುಪಾಲರು ಪಿಯು ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪುಟ್ಟರಾಜು, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಯಂಕನ ಕರುಂಬಯ್ಯ ಖಜಾಂಚಿ ರಮೇಶ್ ಪಿಳ್ಳೆ ಅವರುಗಳನ್ನು ಹಾಗೂ 5 ಮಂದಿ ವಿದ್ಯಾರ್ಥಿನಿಯರ ಪೋಷಕರನ್ನು ಕಾಲೇಜಿಗೆ ಕರೆಸಿ ಸರಕಾರ ನಿಯಮ ಪಾಲಿಸಬೇಕು ಎಂದು ವಿವರಿಸಿದರು.
ಆದರೆ ನಮ್ಮ ಧರ್ಮದ ಸಂಪ್ರದಾಯ ನಾವು ಪಾಲಿಸಬೇಕಾಗುತ್ತದೆ. ಇಷ್ಟು ದಿನ ಇಲ್ಲದ ಕಾನೂನು ಈಗ ಯಾಕೆ? ಹೈಕೋರ್ಟು ತೀರ್ಪು ಬಂದ‌ ನಂತರವೇ ನಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದಾಗಿ ಹೇಳಿದ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!