ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ 28ರಿಂದ ಪ್ಯಾರಿಸ್ನಲ್ಲಿ ಆರಂಭಗೊಳ್ಳಲಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಬಾರಿ ಭಾರತದಿಂದ ದಾಖಲೆಯ 84 ಮಂದಿ ಪ್ಯಾರಾ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ. ಜತೆಗೆ ಆತ್ಮ ವಿಶ್ವಾಸ ತುಂಬಿದ್ದಾರೆ.
ಕಳೆದ ಶುಕ್ರವಾರ ಭಾರತ ಪ್ಯಾರಾಲಿಂಪಿಕ್ ಸಮಿತಿ (ಪಿಸಿಐ) ಮತ್ತು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಎಲ್ಲ ಕ್ರೀಡಾಪಟುಗಳಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿತ್ತು.
ಸೋಮವಾರ ರಾತ್ರಿ ನಡೆದಿದ್ದ ವರ್ಚುವಲ್ ಸಂವಾದದಲ್ಲಿ ಮೋದಿ ಅವರು ಅಥ್ಲೀಟ್‌ಗಳ ಜತೆ ಸಂವಾದ ನಡೆಸಿದ್ದರು. ಇದೇ ವೇಳೆ ಹಲವು ಕ್ರೀಡಾಪಟುಗಳು ತಮ್ಮ ತಯಾರಿಯ ಬಗ್ಗೆ ಮತ್ತು ಈ ಬಾರಿ ಪದಕ ಗೆಲ್ಲುವ ವಿಶ್ವಾಸವನ್ನು ಮೋದಿ ಜತೆ ಹಂಚಿಕೊಂಡರು. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್ ತ್ರೋವರ್ ಸುಮಿತ್ ಅಂಟಿಲ್ ಈ ಬಾರಿಯೂ ಚಿನ್ನ ಗೆಲ್ಲುವುದಾಗಿ ಮೋದಿಗೆ ಭರವಸೆ ನೀಡಿದರು.
ಸುಮಿತ್ ಅಂಟಿಲ್ ಪ್ಯಾರಾಲಿಂಪಿಕ್ಸ್ ಉದ್ಘಾಟನ ಸಮಾರಂಭದಲ್ಲಿ ಶಾಟ್‌ಪುಟರ್ ಭಾಗ್ಯಶ್ರೀ ಜಾಧವ್ ಅವರೊಂದಿಗೆ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಅಥ್ಲೀಟ್‌ಗಳ ಜತೆ ಮಾತನಾಡಿದ ಮೋದಿ, ಯಾವುದೇ ಒತ್ತಡಕ್ಕೊಳಗಾಗದಂತೆ ನೋಡಿಕೊಳ್ಳಿ. ನಿಮ್ಮ ಪಯಣ ನಿಮಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮುಖ್ಯವಾದದ್ದು. ನೀವು ಮಾಡಿದ ಸಾಧನೆಯಿಂದ ಭಾರತೀಯರು ಹೆಮ್ಮೆ ಪಡುತ್ತಾರೆ. ಇಡೀ ದೇಶವೇ ನಿಮ್ಮ ಬೆಂಬಲಕ್ಕಿದೆ. 140 ಕೋಟಿ ಭಾರತೀಯರ ಆಶೀರ್ವಾದ ನಿಮ್ಮ ಮೇಲಿದೆ. ನಿಮ್ಮ ಇಷ್ಟು ವರ್ಷದ ಪರಿಶ್ರಮಕ್ಕೆ ಪ್ಯಾರಿಸ್ನಲ್ಲಿ ಉತ್ತಮ ಪ್ರತಿಫಲ ಸಿಗುವಂತಾಗಲಿ ಎಂದು ಹಾರೈಸಿದ್ದಾರೆ.
ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 19 ಪದಕ ಗೆದ್ದ ಭಾರತ, ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಪ್ಯಾರಿಸ್ಗೆ ಪ್ರಯಾಣ ಬೆಳೆಸಿದೆ. ಈ ಬಾರಿ ದಾಖಲೆಯ 84 ಮಂದಿ ಪ್ಯಾರಾ ಕ್ರೀಡಾಪಟುಗಳು ವಿವಿಧ 12 ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ 24 ಮಂದಿ ಸ್ಪರ್ಧಿಸಿದ್ದರು.