ಪಾರ್ಥಚಟರ್ಜಿ, ಅರ್ಪಿತಾಗೆ ಹತ್ತು ದಿನ ಇಡಿ ಕಸ್ಟಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಮತ್ತು ಅವರೊಂದಿಗೆ ಶಾಮೀಲಾಗಿರುವ ಅರ್ಪಿತಾ ಮುಖರ್ಜಿ ಅವರನ್ನು ಆಗಸ್ಟ್ 3 ರವರೆಗೆ ಜಾರಿ ನಿರ್ದೇಶನಾಲಯ (ಇಡಿ) ಕಸ್ಟಡಿಗೆ ಕಳುಹಿಸಲಾಗಿದೆ. ಪ್ರತಿ 48 ಗಂಟೆಗಳಿಗೊಮ್ಮೆ ಬಂಧಿತ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸುವಂತೆ ನ್ಯಾಯಾಲಯವು ಆದೇಶ ನೀಡಿದೆ.ಅಲ್ಲದೇ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಅರ್ಪಿತಾ ಅವರನ್ನು ವಿಚಾರಣೆ ನಡೆಸದಂತೆ ಇಡಿಗೆ ನ್ಯಾಯಾಲಯ ಆದೇಶ ನೀಡಿದೆ ಎಂದು ಮೂಲಗಳು ವರದಿ ಮಾಡಿವೆ.

ಪಶ್ಚಿಮ ಬಂಗಾಳದಲ್ಲಿ ಶಾಲಾ ಸೇವಾ ಆಯೋಗದ (ಎಸ್‌ಎಸ್‌ಸಿ) ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಪಾರ್ಥ ಅವರನ್ನು ಶನಿವಾರ ಬಂಧಿಸಿದೆ. ಅವರ ಬಂಧನದ ನಂತರ ಇಡಿ ಅವರ ಅಕ್ರಮ ಆಸ್ತಿಗಳನ್ನು ಪತ್ತೆಹಚ್ಚಿದೆ, ಅವುಗಳಲ್ಲಿ ಪಶ್ಚಿಮ ಬಂಗಾಳದ ಡೈಮಂಡ್ ಸಿಟಿಯಲ್ಲಿ ಮೂರು ಫ್ಲಾಟ್‌ಗಳಿವೆ. ಶ್ವಾನಪ್ರೇಮಿ ಎಂದೇ ಖ್ಯಾತಿ ಪಡೆದಿರುವ ಸಚಿವರ ಸಂಪೂರ್ಣ ಹವಾನಿಯಂತ್ರಿತ ಫ್ಲಾಟ್‌ಗಳಲ್ಲಿ ನಾಯಿಗಳಿಗಾಗಿಯೇ ಒಂದು ಫ್ಲಾಟ್‌ ನಿರ್ಮಿಸಿದ್ದಾರೆ ಎನ್ನಲಾಗಿದೆ ಅಲ್ಲದೇ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಕೋಲ್ಕತ್ತಾದ ನಿವಾಸದಿಂದ 21 ಕೋಟಿ ರೂಪಾಯಿ ನಗದು ಮತ್ತು 1 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧನದ ಬೆನ್ನಲ್ಲೇ ಎದೆನೋವು ಎಂದಿದ್ದ ಪಾರ್ಥಚಟರ್ಜಿಯವರನ್ನು ಭುವನೇಶ್ವರದ ಏಮ್ಸ್‌ ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು. ಆದರೆ ಅವರ ಆರೋಗ್ಯದಲ್ಲಿ ಏನೂ ವ್ಯತ್ಯಾಸವಿಲ್ಲವೆಂದು ಏಮ್ಸ್‌ ವೈದ್ಯರು ಹೇಳಿದ್ದರು. ಪ್ರಸ್ತುತ ಅವರನ್ನು ಭುವನೇಶ್ವರದಿಂದ ಕೋಲ್ಕತ್ತಾಗೆ ಕರೆತರಲಾಗಿದ್ದು ಅಲ್ಲಿಂದ ಸಿಜಿಒ ಕಾಂಪ್ಲೆಕ್ಸ್ ಸಾಲ್ಟ್‌ಲೇಕ್‌ನಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!