ಈ ಸ್ವಾತಂತ್ರ್ಯ ಕಲಿಯನ್ನು ನೇತಾಜಿ ಬಹುವಾಗಿ ಮೆಚ್ಚಿಕೊಂಡಿದ್ದರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ವಿಶೇಷ)
ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅವರು 1908 ರ ಅಕ್ಟೋಬರ್ 30 ರಂದು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಸುಂಪೋನ್‌ನಲ್ಲಿ ಜನಿಸಿದರು. ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದರು. ಸ್ವಾತಂತ್ರ್ಯ ಚಳವಳಿಯತ್ತ ಸೆಳೆಯಲ್ಪಟ್ಟ ತೇವರ್ ಅವರು ಕಾಂಗ್ರೆಸ್ ಪಕ್ಷದ ಸದಸ್ಯರಾದರು ಮತ್ತು ಅವರು ಕೇವಲ 19 ವರ್ಷದವರಾಗಿದ್ದಾಗ 1927 ರ ಮದ್ರಾಸ್ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದರು. ಆ ಬಳಿಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಕಟ ಸಹವರ್ತಿಯಾದರು. ನೇತಾಜಿಯವರು ತೇವರ್ ರನ್ನು ತಮ್ಮ ತಾಯಿಗೆ ಪರಿಚಯಿಸುವಾಗ ಈತ ನನ್ನ ಕಿರಿಯ ಸಹೋದರನಂತೆ ಎಂದೇ ಪರಿಚಯಿಸಿದ್ದರು.
ತೇವರ್ ಅವರು 1952 ರಿಂದ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (AIFB) ನ ಉಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ಫಾರ್ವರ್ಡ್‌ ಬ್ಲಾಕ್ ರಾಷ್ಟ್ರೀಯ ಸಂಸತ್ತಿನ ಮಂಡಳಿಗೆ ಮೂರು ಬಾರಿ ಆಯ್ಕೆಯಾದರು. 1939 ರಲ್ಲಿ ಸಿ. ರಾಜಗೋಪಾಲಾಚಾರಿ ಅವರ ಸರ್ಕಾರವು ದೇವಾಲಯ ಪ್ರವೇಶದ ಅಧಿಕಾರ ಮತ್ತು ಪರಿಹಾರ ಕಾಯಿದೆಯನ್ನು ಅಂಗೀಕರಿಸಿತು. ಇದು ದಲಿತರು ಹಿಂದೂ ದೇವಾಲಯಗಳಿಗೆ ಪ್ರವೇಶಿಸುವುದನ್ನು ತಡೆಯುವ ನಿರ್ಬಂಧಗಳನ್ನು ತೆಗೆದುಹಾಕಿತು. ಈ ಬದಲಾವಣೆಯನ್ನು ಬೆಂಬಲಿಸಿದ ತೇವರ್ ಜುಲೈ 1939 ರಲ್ಲಿ ದಲಿತರನ್ನು ಮಧುರೈನ ಮೀನಾಕ್ಷಿ ದೇವಸ್ಥಾನಕ್ಕೆ ಕರೆದೊಯ್ಯಲು ‌ಸಾಮಾಜಿಕ ಕಾರ್ಯಕರ್ತ ಎ. ವೈದ್ಯನಾಥ ಅಯ್ಯರ್‌ ವರಿಗೆ ಸಹಾಯ ಮಾಡಿದರು. 1920 ರಲ್ಲಿ ಬ್ರಿಟಿಷರು ಜಾರಿಗೆ ತಂದ ಕ್ರಿಮಿನಲ್ ಟ್ರೈಬ್ಸ್ ಆಕ್ಟ್ (CTA), ಮುಕುಳಥೋರ್ ಸಮುದಾಯದ ವಿರುದ್ಧವಾಗಿತ್ತು, ಇದರ ವಿರುದ್ಧ ಸಿಡಿದೆದ್ದ ತೇವರ್ ಜನರನ್ನು ಒಟ್ಟುಗೂಡಿಸಿ ಪ್ರತಿಭಟನೆಗಳನ್ನು ನಡೆಸಿದರು. ಇದರಿಂದ ಕ್ರೋಧಗೊಂಡ ಬ್ರಿಟೀಷ್‌ ಆಡಳಿತ ಇಡೀ ಸಮುದಾಯವನ್ನು ಅಪರಾಧಿಗಳನ್ನಾಗಿಸಿ ಜೈಲಿಗೆ ಅಟ್ಟಿತು. ಆದರೆ ತೇವರ್‌ ನಿರಂತರ ಹೋರಾಟಗಳ ಫಲವಾಗಿ 1946 ರಲ್ಲಿ ಕಾಯಿದೆಯನ್ನು ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಅಕ್ಟೋಬರ್ 30, 1963 ರಂದು ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!