ಕೆರಳಿದ ಕರಾವಳಿ: ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳ್ಳಾರೆ ಹಾಗೂ ಸುರತ್ಕಲ್ ಪರಿಸರದಲ್ಲಿ ನಡೆದ ಬರ್ಬರ ಹತ್ಯೆಗಳ ಬೆನ್ನಿಗೇ ಕರಾವಳಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಶಾಂತಿ ಸಭೆ ಆಯೋಜಿಸಿದೆ.

ಈ ನಡುವೆ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ಆ.6ರವರೆಗೆ ನಿಷೇಧಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ. ಊಹಾಪೋಹಗಳಿಗೆ ಕಿವಿಗೊಡಬೇಡಿ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕಿನಾದ್ಯಂತ ಸೆಕ್ಷನ್ 144 ಜಾರಿಯಲ್ಲಿರಲಿದೆ. ಅಲ್ಲದೆ ಮಂಗಳೂರು ತಾಲೂಕಿನ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ನಿಷೇಧಾಜ್ಞೆ ಇರಲಿದೆ. ಜನತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಒತ್ತು ನೀಡಬೇಕು. ಯಾವುದೇ ಊಹಾಪೋಹಗಳಿಗೆ ಕಿವಿಗೊಡ ಬಾರದೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿಷೇಧ

ಜನತೆ ಗುಂಪು ಗುಂಪಾಗಿ ಓಡಾಡುವುದು, ವಿನಾ ಕಾರಣ ತಿರುಗಾಡುವುದಕ್ಕೆ ಅವಕಾಶವಿಲ್ಲ. ಪ್ರತಿಭಟನೆ, ಮೆರವಣಿಗೆ, ವಿಜಯೋತ್ಸವ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ ಎಂದವರು ತಿಳಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್ ಮೂಲ್ಕಿ, ಪಣಂಬೂರು ಮತ್ತು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಗುರುವಾರ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಯಲ್ಲಿದೆ. ಸುರತ್ಕಲ್‌ನಲ್ಲಿ ಗುರುವಾರ ರಾತ್ರಿ ಮುಹಮ್ಮದ್ ಫಾಝಿಲ್ ಎಂಬ ಯುವಕನ ಹತ್ಯೆಯಾದ ಬಳಿಕ ನಗರ ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಹೊರಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!