Friday, August 19, 2022

Latest Posts

ಶಾಂತಿಯುತ ಗಣೇಶೋತ್ಸವ ಆಚರಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮನವಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಹಾವೇರಿ:

ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಶಾಂತಿಯುತವಾಗಿ ಗಣೇಶೋತ್ಸವ ಆಚರಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ನೇತೃತ್ವದಲ್ಲಿ ಜರಗಿದ ಶಾಂತಿ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ಖಾಸಗಿ ಹೋಟೆಲವೊಂದರಲ್ಲಿ ಬುಧವಾರ ಪೋಲಿಸ್ ಇಲಾಖೆ ಆಯೋಜಿಸಿದ ಗಣೇಶ ಹಬ್ಬದ ಶಾಂತಿ ಸಭೆಯಲ್ಲಿ ಜಿಲ್ಲೆಯ ವಿವಿಧ ಸಮುದಾಯ, ಧರ್ಮಗಳ ಮುಖಂಡರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಸಾಮರಸ್ಯದಿಂದ ಆಚರಿಸಬೇಕು. ಮನುಷ್ಯನ ಆರೋಗ್ಯ ಹಾಗೂ ಪರಿಸರಕ್ಕೆ ಹಾನಿಕಾರಕವಾದ ಪಿಒಪಿ ಮೂರ್ತಿಗಳು ಬಳಸಬಾರದು. ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಮಾತ್ರ ಪ್ರತಿಷ್ಠಾಪನೆ ಮಾಡಬೇಕು. ಪಿಒಪಿ ಮೂರ್ತಿಗಳ ಮಾರಾಟ ಕಂಡುಬಂದಲ್ಲಿ ಸೀಜ್ ಮಾಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸ್ಥಳೀಯ ಆಡಳಿತದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಅನುಮತಿ ಪಡೆಯಲು ಅನುಕೂಲವಾಗುವಂತೆ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುವುದು ಎಂದರು.
ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭ ಡಿಜೆ ಬಳಸಲು ಅವಕಾಶ ಇರುವುದಿಲ್ಲ. ಗಣೇಶೋತ್ಸವದಲ್ಲಿ ನೃತ್ಯ, ಸಂಗೀತ ಸೇರಿದಂತೆ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಮಾತನಾಡಿ, ದೇವಸ್ಥಾನ ಹಾಗೂ ತಮ್ಮ ತಮ್ಮ ಮನೆಗಳಲ್ಲಿ, ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಗಣೇಶ ಹಬ್ಬ ಆಚರಿಸಬೇಕು. ಗುಂಪುಗೂಡಲು ಅವಕಾಶವಿರುವುದಿಲ್ಲ. ನಿಯಮದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಅಡಿ ಹಾಗೂ ಮನೆಯೊಳಗೆ ಎರಡು ಅಡಿ ಮೀರದಂತೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ ಮಾತನಾಡಿ, ಕರೋನಾ ಎರಡನೇ ಅಲೆಯಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ. ಅಲ್ಲದೆ ಮೂರನೇ ಅಲೆಯ ಆರ್ಭಟ ಹೆಚ್ಚಾಗಿದೆ. ಹೀಗಾಗಿ ಗಣೇಶೊತ್ಸವ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಬೇಕು ಎಂದು ಮನವಿ ಮಾಡಿಕೊಂಡು.
ನಗರಸಭೆ ವತಿಯಿಂದ ಅಕ್ಕಮಹಾದೇವಿ ಹೊಂಡದಲ್ಲಿ ಸಾರ್ವಜನಿಕ ಗಣೇಶ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ನಾಗೇಂದ್ರಮಟ್ಟಿಯಲ್ಲಿ ಹಾಗೂ ಹೊಸದಾಗಿ ಬಸವೇಶ್ವರ ನಗರ ಮತ್ತು ಅಶ್ವಿನಿ ನಗರಗಳಲ್ಲಿ ಕಿರುಹೊಂಡ ನಿರ್ಮಿಸಿ ಸಾರ್ವಜನಿಕ ಗಣೇಶ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಬೇಡಿಕೆ ಅನುಸಾರ ಹೆಚ್ಚುವರಿ ಕಿರುಹೊಂಡ ನಿರ್ಮಿಸಲಾಗುವುದು ಎಂದರು.
ರಾಣೇಬೆನ್ನೂರು ನಗರಸಭೆ ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ ಮಾತನಾಡಿ, ರಾಣೇಬೆನ್ನೂರು ನಗರದ ಏಳು ಕಡೆ ಸಾರ್ವಜನಿಕ ಗಣೇಶ ವಿಸರ್ಜನೆಗೆ ತೊಟ್ಟಿ ನಿರ್ಮಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ ಸಿಇಒ ಮಹಮ್ಮದ್ ರೋಷನ್, ಡಿವೈಎಸ್‌ಪಿ ಶಂಕರ ಮಾರಿಹಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರು, ಶಿಗ್ಗಾಂವ ಪುರಸಭೆ ಅಧ್ಯಕ್ಷ ಶ್ರೀಕಾಂತ, ಪೊಲೀಸ್ ಅಧಿಕಾರಿಗಳು, ಗಣೇಶ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!