ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರುಗಳ ನಡುವಿನ ಓವರ್ ಟೇಕ್ ಧಾವಂತಕ್ಕೆ ವೃದ್ಧೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾ.ಹೆ.66 ರ ಅಡಂಕುದ್ರುವಿನಲ್ಲಿ ಸೋಮವಾರ ಸಂಜೆ ನಡೆದಿದ್ದು,ಮಹಿಳೆಗೆ ಡಿಕ್ಕಿ ಹೊಡೆದ ಕಾರು ಮತ್ತು,ಓವರ್ ಟೇಕ್ ಮಾಡುತ್ತಿದ್ದ ಕಾರುಗಳೆರಡು ಹೆದ್ದಾರಿ ಬದಿಯ ಕಮರಿಗೆ ಉರುಳಿ ಬಿದ್ದಿವೆ.
ಸೇವಂತಿಗುಡ್ಡೆಯ ನಿವಾಸಿ ಕೃಷ್ಣಪ್ಪ ಶೆಟ್ಟಿ ಅವರ ಪತ್ನಿ ಬೇಬಿ (65) ಮೃತ ವೃದ್ಧೆ.
ಬೇಬಿ ಅವರು ಅಡಂ ಕುದ್ರುವಿನಲ್ಲಿ ಬಾಡಿಗೆ ಅಂಗಡಿ ನಡೆಸುತ್ತಿದ್ದರು.ಅವರು ಪಂಪ್ವೆಲ್ನ ಅಪಾರ್ಟ್ ಮೆಂಟ್ ಒಂದರಲ್ಲಿ ರಾತ್ರಿ ಪಾಳಿ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಸಾಯಂಕಾಲ ಬೇಬಿ ಅವರು ರಾತ್ರಿ ಪಾಳಿ ಕೆಲಸಕ್ಕೆ ಹೊರಟಿದ್ದು,ಪತಿ ಸ್ಕೂಟರಲ್ಲಿ ಪತ್ನಿಯನ್ನ ಅಡಂ ಕುದ್ರುವರೆಗೆ ಬಿಟ್ಟು ಅಂಗಡಿಗೆ ಹಿಂತಿರುಗಿದ್ದರು. ಬೇಬಿ ಅವರು ಬಸ್ಸು ಹತ್ತಲು ಹೆದ್ದಾರಿ ದಾಟುತ್ತಿದ್ದ ವೇಳೆ ತೊಕ್ಕೊಟ್ಟಿನಿಂದ ಮಂಗಳೂರಿನ ಕಡೆಗೆ ವೇಗವಾಗಿ ಧಾವಿಸುತ್ತಿದ್ದ ಪೋಲೊ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೇಬಿಯವರ ಕಾಲೊಂದು ತುಂಡಾಗಿದ್ದು,ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ಪೋಲೊ ಕಾರು ಹೆದ್ದಾರಿ ಅಂಚಿನ ಆಳವಾದ ಕಮರಿಗೆ ಉರುಳಿ ಬಿದ್ದಿದೆ. ಪೋಲೋ ಕಾರನ್ನು ಓವರ್ ಟೇಕ್ ಮಾಡುತ್ತಿದ್ದ ಕಿಯಾ ಕಾರು ಕೂಡ ರಸ್ತೆ ಬದಿಯ ಪೊದೆಗೆ ನುಗ್ಗಿದೆ.