Thursday, August 11, 2022

Latest Posts

ಮಾಲೂರು ಗಂಗಾಪುರದ ಗೋ ಆಶ್ರಮಕ್ಕೆ ಪೇಜಾವರ ಶ್ರೀ ಭೇಟಿ

ಹೊಸದಿಗಂತ ವರದಿ,ಕೋಲಾರ:

ಪೇಜಾವರ ಮಠಾಧೀಶ  ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ  ಟೀಮ್ ಗೋಪಾಲ್ಸ್ ನವರು ಸಂಘಟಿಸಿದ ಗೋ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀಗಳವರು ’ಜೀವನ ಪೂರ್ತಿ ಹಾಲು ನೀಡಿ ನಮ್ಮನ್ನು  ಸಲಹುವ ಗೋಮಾತೆಯನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಪ್ರತಿದಿನ ನಾವು ಊಟ ಮಾಡುವ ಮೊದಲು ಗೋಗ್ರಾಸ ನೀಡಬೇಕು. ಇಂದಿನ ಜೀವನ ಶೈಲಿಯಲ್ಲಿ ಇದು ಸಮಸ್ಯೆಯಾದರೆ ಮನೆಯಲ್ಲಿ ಹುಂಡಿ ಇಟ್ಟು ಊಟದ ಮೊದಲು ಹುಂಡಿಗೆ ಯಥಾಶಕ್ತಿ ಹಣವನ್ನು ಹಾಕಿ, ತಿಂಗಳಿಗೊಮ್ಮೆ ಯಾವುದಾದರೂ ಗೋಶಾಲೆಗೆ ನೀಡಿ ಗೋರಕ್ಷಣೆಯಲ್ಲಿ ಭಾಗಿಗಳಾಗಬೇಕೆಂದು ಕರೆ ನೀಡಿದರು. ಗೋಶಾಲೆಯನ್ನು ಬ್ರಹ್ಮರಥಕ್ಕೆ ಹೋಲಿಸಿದ ಶ್ರೀಗಳವರು, ಬ್ರಹ್ಮರಥವನ್ನು ಒಬ್ಬಿಬ್ಬರು ಎಳೆಯಲು ಸಾಧ್ಯವಿಲ್ಲ. ಹೇಗೆ ನೂರಾರು ಜನರು ಸೇರಿ ಎಳೆಯಬಹುದೋ, ಹಾಗೆ ಗೋಶಾಲೆಯನ್ನು ನಡೆಸಲು ಸಾವಿರಾರು ಜನರು ಕೈಜೋಡಿಸಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ಗೋಉತ್ಪನ್ನಗಳ ತಯಾರಿಯ ಬಗ್ಗೆ ಹಾಗೂ ಭಾರತೀಯ ಗೋತಳಿಗಳ ಬಗ್ಗೆಮಾಹಿತಿ ನೀಡಲಾಯಿತು. ಟೀಮ್ ಗೋಪಾಲ್ಸ್ ನ ಸ್ವಯಂಸೇವಕರು ಗೋಶಾಲೆಯನ್ನು ಸ್ವಚ್ಛಗೊಳಿಸಿ ಶ್ರಮಾದಾನದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಶ್ರೀರಂಗಂನ ಶ್ರೀಮಾನ್ ಟ್ರಸ್ಟ್ ನ ಸ್ಥಾಪಕ ಪರಾಶರ ಬದರಿನಾರಾಯಣ ಭಟ್ಟರ್,  ಮಾಗೌಪ್ರಾಡಕ್ಟ್ ನ ವ್ಯವಸ್ಥಾಪಕ ನಿರ್ದೇಶಕ ಉದ್ಯಮಿ ಮಹಾಬೀರ್ ಸೋನಿಕಾ, ರಾಘವೇಂದ್ರ ಗೋಆಶ್ರಮದ ಸಮಿತಿ ಅಧ್ಯಕ್ಷ ಡಾ. ಶ್ಯಾಮಪ್ರಸಾದ್, ಕಾರ್ಯದರ್ಶಿ ಶ್ರೀಕಾಂತ ಹೆಗಡೆ, ಸಮಿತಿ ಸದಸ್ಯರು, ವ್ಯವಸ್ಥಾಪಕ ರಾಮಚಂದ್ರ ಅಜ್ಜಕಾನ, ಟೀಮ್ ಗೋಪಾಲ್ಸ್ ನ ರಾಮಸುಬ್ರಮಣ್ಯಂ, ಮಧು, ರಾಜೇಶ್, ಸದಾಶಿವ್, ಲೋಹಿತ್, ಸುಮಾರು ಇನ್ನೂರಕ್ಕೂ ಹೆಚ್ಚು ಸ್ವಯಂಸೇವಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss