ಗಮನ ಸೆಳೆಯುತ್ತಿದೆ ಈ ಕ್ಷೇತ್ರದ ಮತಗಟ್ಟೆ: ಚುನಾವಣೆ ಆಯೋಗದ ಹೊಸ ಪ್ರಯೋಗಕ್ಕೆ ಜನರ ಮೆಚ್ಚುಗೆ

– ಬಸವರಾಜ ಗುಂಡಿ

ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಚುನಾವಣಾ ಆಯೋಗವೂ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಅದರ ಭಾಗವಾಗಿ ಸಂಡೂರು ತಾಲೂಕಿನ ಸುಶೀಲಾನಗರದ ಗ್ರಾಪಂ ಕಾರ್ಯಾಲಯದಲ್ಲಿ ಗಣಿ ಪ್ರದೇಶ ಮಾದರಿ ಮತಗಟ್ಟೆ ಆಕರ್ಷಣೀಯ, ಮೂಲ ಸೌಲಭ್ಯ ಹಾಗೂ ಮತದಾನಕ್ಕೆ ಆಹ್ಲಾದಕತೆಯಿಂದ ಝಗಝಗಿಸುತ್ತಿದೆ.

ಗಣಿ ಪ್ರದೇಶ ಮತಗಟ್ಟೆ ವಿಶೇಷ ಏನು?

ಗಣಿ ಪ್ರದೇಶ ಮತಗಟ್ಟೆ ಹೆಸರೇ ಸೂಚಿಸುವಂತೆ ಗಣಿ ತಾಲೂಕಿನ ಚಿತ್ತಾರವನ್ನು ಒಳಗೊಂಡಿದೆ. ಸ್ವತಃ ಈ ಗ್ರಾಮವೂ ಕೂಡ ಗಣಿಗಳಿಂದ ಸುತ್ತುವರೆದಿದ್ದು, ಮತಗಟ್ಟೆ ಹೊರಗೋಡೆಗೆ ಮೈನಿಂಗ್ ಪ್ರದೇಶದ ಚಿತ್ರ, ಸಂಡೂರು ನಾರಿಹಳ್ಳಿ ಜಲಾಶಯದ ಎರಡು ಗುಡ್ಡಗಳ ಮಧ್ಯೆ ನೀರು ಸಾಗುವ ಮನಮೋಹಕ ದೃಶ್ಯ ಚಿತ್ರಿಸಲಾಗಿದೆ.

ಒಳಗೆ ಸಾಗಿದರೆ ಲಂಬಾಣಿ ಸ್ತ್ರೀಯರು ಸ್ಥಳೀಯ ಸಾಂಪ್ರದಾಯಿಕ ಶೈಲಿ ಉಡುಗೆಯ ಚಿತ್ರಗಳು ಸ್ವಾಗತಿಸುತ್ತವೆ. ಮತದಾನ ಮಾಡುವ ಕೊಠಡಿಯಲ್ಲಿ ಸಂಡೂರು ಅರಮನೆ , ಹಂಪಿ ಕಲ್ಲಿನ ತೇರು ಹಾಗೂ ವಿರುಪಾಕ್ಷೇಶ್ವರ ದೇವಸ್ಥಾನ, ಮತ್ತೊಂದೆಡೆ ಕುಮಾರಸ್ವಾಮಿ ದೇವಾಲಯವನ್ನು ಕಾಣಬಹುದು.

ಮಕ್ಕಳ ಆಟಕ್ಕೂ ಕೊಠಡಿ:

ಪಂಚಾಯತಿಯ ಅಧ್ಯಕ್ಷರ ಕೊಠಡಿಯನ್ನೇ ಮಕ್ಕಳ ಆಟಿಕೆ ಕೊಠಡಿಯಾಗಿ ಪರಿವರ್ತಿಸಲಾಗಿದೆ. ವಿವಿಧ ಆಟಿಕೆಗಳು ಮತ್ತು ಮಕ್ಕಳು ಕುಳಿತುಕೊಳ್ಳಲು ಸಣ್ಣ ಕುರ್ಚಿಗಳನ್ನು ಹಾಕುವ ಮೂಲಕ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಲಾಗಿದೆ. ಮತದಾನಕ್ಕೆ ಬರುವ ತಾಯಂದಿರು ತಮ್ಮ ಮಕ್ಕಳನ್ನು ಈ ಕೊಠಡಿಯೊಳಗೆ ಆಟವಾಡಲು ಬಿಟ್ಟು ನಿಶ್ಚಿಂತೆಯಿಂದ ಮತದಾನ ಮಾಡಬಹುದು. ಇದಕ್ಕೆ ಅವಶ್ಯಕ ಆಟದ ಸಾಮಗ್ರಿಗಳನ್ನು ಕೂಡ ಒದಗಿಸಲಾಗಿದೆ.

ಮೂಲಭೂತ ಸೌಲಭ್ಯ:

ಬೇಸಿಗೆ ಹೆಚ್ಚಾಗಿದ್ದು, ಮತದಾನಕ್ಕೆ ಬಂದವರಿಗೆ ಎಸಿ ಅಳವಡಿಸಿ ಹವಾನಿಯಂತ್ರಿತ ವಾತಾವರಣ, ನೆಲಕ್ಕೆ ಮ್ಯಾಟ್, ಅಂಗವಿಕಲರಿಗೆ ರಾಂಪ್, ಮತದಾರರು ಸರತಿಯಲ್ಲಿ ಕುಳಿತುಕೊಳ್ಳಲು 100 ಕುರ್ಚಿಗಳು, ಓದಲು ದಿನಪತ್ರಿಕೆಗಳು, ಶೌಚಾಲಯ ಹೀಗೆ ಹಲವು ಮೂಲಸೌಲಭ್ಯ ಕಲ್ಪಿಸಲಾಗಿದೆ.

ಸುಶೀಲಾನಗರ ಹೊರತ ಪಡಿಸಿ ಇತರೆಡೆಯೂ ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ನಾರಾಯಣಪುರ ಪ್ರಾಥಮಿಕ ಶಾಲೆ, ಸಂಡೂರಿನ ಉರ್ದು ಶಾಲೆ, ವಡ್ಡು ಗ್ರಾಮದ ಪ್ರಾಥಮಿಕ ಶಾಲೆ, ಜಿಂದಾಲ್ ವಿದ್ಯಾನಗರದ ವಿಶಾಲ ಬಾಲವಾಡಿ, ಎನ್ಎಂಡಿಸಿ ಕೇಂದ್ರೀಯ ವಿದ್ಯಾಲಯದಲ್ಲಿ ಪರಿಸರ ಸ್ನೇಹಿ ಮತಗಟ್ಟೆ ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 11 ವಿಶೇಷ ಮತಗಟ್ಟೆಗಳನ್ನು ಈ ಬಾರಿ ನಿರ್ಮಿಸಲಾಗಿದೆ.

ಒಟ್ಟಿನಲ್ಲಿ ಶೇ.100ರಷ್ಟು ಮತದಾನ ಗುರಿ ಇದ್ದು, ಮತದಾರ ಪ್ರಭುಗಳ ಸಕಾರಾತ್ಮಕ ಸ್ಪಂದನೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಒಟ್ಟಾರೆ ಪ್ರಯತ್ನ ಮಾತ್ರ ಜನರ ಶ್ಲಾಘನೆಗೆ ಒಳಗಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!