Tuesday, August 16, 2022

Latest Posts

ಬೆಲೆ ಏರಿಕೆಯಿಂದ ಜನರಿಗೆ ಸಂಕಷ್ಟ: ಮಾಜಿ ಸಚಿವ ಬಿ. ರಮಾನಾಥ ರೈ

ಹೊಸದಿಗಂತ ವರದಿ, ಮಂಗಳೂರು:

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದು, ಆಡಳಿತ ಪಕ್ಷದ ಜನಪ್ರತಿನಿಧಿಗಳಿಂದ ಇದರ ಸಮರ್ಥನೆ ಅಪಾಯಕಾರಿಯಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸದಿದ್ದರೆ ಜನರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಬೆಲೆ ಏರಿಕೆ ಹಾಗೂ ಕೇಂದ್ರ ಹಾಗೂ ರಾಜ್ಯದ ಆಡಳಿತ ವೈಫಲ್ಯಕ್ಕೆ ಪ್ರತಿಯಾಗಿ ಈಗಾಗಲೇ ಕರ್ನಾಟಕ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಜನ ನೀಡಿರುವ ಪ್ರತಿಕ್ರಿಯೆಯಿಂದಲೇ ಸಾಬೀತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಕಾಂಗ್ರೆಸ್ ಮುಕ್ತ ಮಾಡುತ್ತೇವೆಂದು ಹೇಳುತ್ತಾ ಬಂದ ಬಿಜೆಪಿಗೆ ಜನರೇ ಮುಂದಿನ ದಿನಗಳಲ್ಲಿ ಉತ್ತರಿಸಲಿದ್ದಾರೆ. ಯಾರನ್ನು ಮುಕ್ತ ಮಾಡಬೇಕೆಂದು ಜನತೆ ತೀರ್ಮಾನಿಸಲಿದ್ದಾರೆ. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಹಣಬಲ, ತೋಳ್ಬಲ ಪ್ರದರ್ಶಿಸಿರುವುದು ಮಾತ್ರವಲ್ಲದೆ, ಎರಡು ಕ್ಷೇತ್ರಗಳ ಚುನಾವಣೆಯ ಸಂದರ್ಭ ಆಡಳಿತ ಯಂತ್ರ ದುರುಪಯೋಗಪಡಿಸಿದ್ದಾರೆ. ಆದರೂ ಹಾನಗಲ್‌ನಲ್ಲಿ ಜನತೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಕ್ಷೀಣಿಸಿದ್ದ ಕಾಂಗ್ರೆಸ್ ಬಲ ಈ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ವೃದ್ಧಿಸಲು ಸಹಕರಿಸಿದ್ದಾರೆ ಎಂದರು.
ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ, ಅಧಿಕಾರಕ್ಕೆ ಬಂದು ೧೦೦ ದಿನಗಳಲ್ಲೇ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡುವುದಾಗಿ, ಕಪ್ಪು ಹಣ ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದವರಿಗೆ ಇದೀಗ ಅವರದ್ದೇ ಭಾಷಣದ ತುಣುಕುಗಳನ್ನು ಮತ್ತೆ ನೆನಪಿಸಬೇಕಾದ ಕಾಲ ಬಂದಿದೆ. ನಿರಂತರವಾಗಿ ಸಾಗುತ್ತಿರುವ ಬೆಲೆ ಏರಿಕೆಯಿಂದ ಜನ ರೋಸಿಹೋಗುತ್ತಿದ್ದಾರೆ. ಜನರ ಸಮಸ್ಯೆಗಳತ್ತ ಆಡಳಿತ ಪಕ್ಷದವರು ಗಮನ ಹರಿಸಬೇಕು ಎಂದರು.
ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಕೆ. ಹರಿನಾಥ್, ಭಾಸ್ಕರ ಕೆ., ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಪ್ರಮುಖರಾದ ಶಾಲೆಟ್ ಪಿಂಟೊ, ಲುಕ್ಮಾನ್ ಬಂಟ್ವಾಳ, ಗಣೇಶ್ ಪೂಜಾರಿ, ನೀರಜ್‌ಚಂದ್ರ ಪಾಲ್, ಅಪ್ಪಿ, ನವೀನ್ ಡಿಸೋಜ, ಶುಭೋದಯ ಆಳ್ವ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!