ಹೊಸದಿಗಂತ ಆನ್ ಲೈನ್ ಡೆಸ್ಕ್:
18 ವರ್ಷಕ್ಕಿಂತ ಮೇಲ್ಪಟ್ಟವರು ಯಾರಾದರೂ ತಮಗೆ ಹಿತವೆನ್ನಿಸುವ ಧರ್ಮವನ್ನು ಆರಿಸಲು ಮುಕ್ತರು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಧಾರ್ಮಿಕ ಮತಾಂತರವನ್ನು ತಡೆಯುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಮೂಢನಂಬಿಕೆ, ಪ್ರಚೋದನೆ, ಮಾಟಮಂತ್ರ, ಆರ್ಥಿಕ ಲಾಭದ ಹೆಸರಿನಲ್ಲಿ ಮತಾಂತರ ನಡೆಯುತ್ತಿದ್ದು, ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸಬೇಕು ಎಂದು ಕೋರಲಾಗಿತ್ತು. ಬಿಜೆಪಿ ಮುಖಂಡರಾದ ಅಶ್ವಿನಿ ಉಪಾಧ್ಯಾಯ ಅವರು ಈ ಅರ್ಜಿ ಸಲ್ಲಿಸಿದ್ದರು.
ಆದರೆ ಈ ಅರ್ಜಿಯನ್ನು ಮಾನ್ಯ ಮಾಡಲು ನಿರಾಕರಿಸಿದ ಸುಪ್ರೀಂಕೋರ್ಟ್, 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಯು ತನ್ನ ಧರ್ಮವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಯಾವುದೇ ಕಾರಣವಿಲ್ಲ, 18 ವರ್ಷ ದಾಟಿದರೆ ಧರ್ಮ ಆಯ್ಕೆಗೆ ಅವರು ಸ್ವತಂತ್ರರು ಎಂದು ಹೇಳಿದೆ.
ಬಲವಂತದ ಮತಾಂತರವು ಅನುಚ್ಛೇದ 14, 21, 25 ರ ಉಲ್ಲಂಘನೆ ಮಾತ್ರವಲ್ಲ, ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗವಾಗಿರುವ ಜಾತ್ಯತೀತತೆಯ ತತ್ವಕ್ಕೂ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಧರ್ಮದ ದುರುಪಯೋಗ ತಡೆಯಲು ಸಮಿತಿ ನೇಮಿಸಿ ಮತಾಂತರ ಕಾನೂನು ಜಾರಿಗೆ ತರುವ ಸಾಧ್ಯತೆ ಗಳನ್ನು ಕಂಡುಹಿಡಿಯಲು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
ಆದರೆ, ಕೋರ್ಟ್ ಈ ಅರ್ಜಿಯನ್ನು ಮಾನ್ಯ ಮಾಡಲಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ, ಬದಲಿಗೆ ಪಬ್ಲಿಸಿಟಿಗಾಗಿ ಸಲ್ಲಿಸಿರುವ ಅರ್ಜಿಯಂತಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಕೋರ್ಟ್ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಹೇಳಿ ವಜಾ ಮಾಡಿದ ಹಿನ್ನೆಲೆಯಲ್ಲಿ ಇದೇ ಬೇಡಿಕೆಯನ್ನಿಷ್ಟು ಅಶ್ವಿನಿ ಅವರು ಇದೀಗ ಕೇಂದ್ರ ಕಾನೂನು ಸಚಿವಾಲಯಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.