ಗೋ ಭಕ್ಷಕರಿಗೆ ಪ್ರೋತ್ಸಾಹ ಕೊಟ್ಟವರ ಬಾಯಲ್ಲಿ ನಂದಿನಿ ಉಳಿಸುವ ಮಾತು: ಸಿದ್ದುಗೆ ‘ಸಿಂಹ’ ಚಾಟಿ!

ಹೊಸದಿಗಂತ ವರದಿ ಮೈಸೂರು:

ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಗೋಭಕ್ಷಕರಿಗೆ ಪ್ರೋತ್ಸಾಹ ನೀಡಿದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ನಂದಿನಿ ಹಾಲಿನ ವಿಚಾರವಾಗಿ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಸೋಮವಾರ ನಗರದಲ್ಲಿ ನೂತನವಾಗಿ ಉದ್ಘಾಟನೆಯಾದ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರ ದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದು ಬಿಜೆಪಿ. ಹಾಗಾಗಿ ನಮಗೆ ಕಾಂಗ್ರೆಸ್ , ಜೆಡಿಎಸ್ ನವರಿಂದ ನಂದಿನಿ ಮತ್ತು ಕೆಎಂಎಫ್ ಅನ್ನು ಕಾಪಾಡುವಂತಹ ಪಾಠವನ್ನು ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ರಾಜ್ಯದಲ್ಲಿ ಅಮೂಲ್ ನೊಂದಿಗೆ ನಂದಿನಿಯನ್ನು ವಿಲೀನಗೊಳಿಸಲಾಗುತ್ತಿದೆ ಎಂದು ದೊಡ್ಡಮಟ್ಟದಲ್ಲಿ ಕಾಂಗ್ರೆಸ್ ನವರು ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹಬ್ಬಿಸುತ್ತಿದ್ದಾರೆ.ಆದರೆ ನಾವು ಘಂಟಾಘೋಷವಾಗಿ ಹೇಳಿದ್ದೇವೆ. ಅಮೂಲ್ ಮತ್ತು ಕೆಎಂಎಫ್ ಅನ್ನು ವಿಲೀನ ಮಾಡುತ್ತಿಲ್ಲ, ಈ ತರ ಸುಳ್ಳು ಅಪಪ್ರಚಾರವನ್ನು ಮಾಡಬೇಡಿ. ಕೆಎಂಎಫ್ ನವರು ಕೂಡ ಪದೇ ಪದೇ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡಿ ಜನಕ್ಕೆ ಸ್ಪಷ್ಟನೆಯನ್ನು ಕೊಟ್ಟಿದ್ದರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಸುಳ್ಳು ಆರೋಪವನ್ನೇ ಪುನರಾವರ್ತನೆ ಮಾಡುತ್ತಿದ್ದಾರೆ. ಇಷ್ಟು ದಿನಗಳವರೆಗೆ ಹಿಂದಿ ಹೇರಿಕೆ ಅಂದರು, ಈಗ ಅಮೂಲ್ ಹೇರಿಕೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನವರಿಗೆ ಕೇಳಲು ಬಯಸುತ್ತೇನೆ.
ಸಿದ್ದರಾಮಯ್ಯನವರೆ, ಕುಮಾರಸ್ವಾಮಿಯವರೇ, ಈ ಹೆರಿಟೇಜ್, ದೊಡ್ಲಾ, ಮಿಲ್ಕಿ ಮಿಸ್ಟ್, ಆರೋಕ್ಯ ಇವೆಲ್ಲ ನಂದಿನಿಯ ಅಕ್ಕ-ತಂಗಿಯರು, ಅಣ್ಣ ತಮ್ಮಂದಿರಾ? ಅಥವಾ ತಮಿಳುನಾಡಿನಿಂದ, ಆಂಧ್ರದಿಂದ, ತೆಲಂಗಾಣದಿಂದ ಕರ್ನಾಟಕಕ್ಕೆ ಮದುವೆಯಾಗಿ ಬಂದಿರುವ ನಂದಿನಿಯ ಸೊಸೆಯಂದಿರು, ಅಳಿಯಂದಿರಾ ಎಂದು ಪ್ರಶ್ನಿಸಿದರು.

ಇಷ್ಟು ವರ್ಷದಿಂದ ದೊಡ್ಲಾ, ಹೆರಿಟೇಜ್ ಇವೆಲ್ಲ ಕರ್ನಾಟಕದಲ್ಲಿ ಇಲ್ವಾ? ಅಥವಾ ಅಮೂಲ್ ಈಗಾಗಲೇ ಬಂದಿಲ್ವಾ? ಬಿಜೆಪಿ ಬಂದ ಮೇಲೆ ಅಮೂಲ್ ಬಂದಿರುವಂಥದ್ದಾ? ಇಷ್ಟಾಗಿಯೂ ಯಾಕೆ ಈ ರೀತಿ ಅಪಪ್ರಚಾರವನ್ನು ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಹಾಲು ಉತ್ಪಾದನೆ ಬಗ್ಗೆ, ನಂದಿನಿ ಬಗ್ಗೆ, ಕರ್ನಾಟಕ ಮಿಲ್ಕ ಫೆಡರೇಷನ್ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿರುವಂಥದ್ದು ಭಾರತೀಯ ಜನತಾ ಪಕ್ಷ. ಮಾಜಿ ಸಿಎಂ ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಹಾಲಿಗೆ ಎರಡು ರೂಪಾಯಿ ಪ್ರೋತ್ಸಾಹ ಧನವನ್ನು ಕೊಟ್ಟಿದ್ದರು. ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪ್ರೋತ್ಸಾಹಧನವನ್ನು ಐದು ರೂಪಾಯಿಗೆ ಏರಿಸಿದ್ದರು. ಹಾಲು ಕೊಡುವಂತಹ ಗೋವಿನ ಹತ್ಯೆ ನಿಷೇಧಕ್ಕಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದವರು ನಾವು. ನಮಗೆ ಕಾಂಗ್ರೆಸ್ ನವರಿಂದ, ಜೆಡಿಎಸ್ ನವರಿಂದ ನಂದಿನಿ ಮತ್ತು ಕೆಎಂಎಫ್ ನ್ನು ಕಾಪಾಡುವಂತಹ ಪಾಠ ಬೇಕಾಗಿಲ್ಲ. ಹಾಲು ಕೊಡುವಂತಹ ಹಸುವಿನ ರಕ್ಷಣೆಗೆ ಬದ್ಧವಾಗಿದ್ದು ಬಿಜೆಪಿ ಸರ್ಕಾರ ಎಂದು ಸ್ಪಷ್ಟಪಡಿಸಿದರು.

ಇಷ್ಟೆಲ್ಲ ಮಾತಾಡ್ತಿದ್ದೀರಲ್ಲ ಅಮೂಲ್ ಬಗ್ಗೆ, ಸಿದ್ದರಾಮಯ್ಯನವರೇ ಹಾಲು ಕೊಡುವ ಹಸುವನ್ನೇ ಕಡಿದು ತಿನ್ನೋಕೆ ಅಂತ ತೀರ್ಥಹಳ್ಳಿ ಹತ್ತಿರ ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದನಲ್ಲ ದನಗಳ್ಳ ಅವನ ಮೇಲೆ ಪೊಲೀಸರು ಗೋಲಿಬಾರ್ ಮಾಡಿ ಸಾಯಿಸಿದಾಗ, ದನಗಳ್ಳನಿಗೆ ನೀವು ಪರಿಹಾರ ಕೊಟ್ಟು ಪೊಲೀಸ್ ಕಾನ್ಸಟೇಬಲ್ ಗೆ ಸಸ್ಪೆನ್ಶನ್ ಬಳುವಳಿ ಕೊಟ್ಟವರು. ನಿಮಗೆ ಮತ್ತೇನಾದರೂ ಅಧಿಕಾರ ಕೊಟ್ಟು ಬಿಟ್ಟರೆ ಗೋಹತ್ಯೆಯನ್ನು ಮಾಡಿ ಗೋವನ್ನು ತಿನ್ನುವವರ ಸಂಖ್ಯೆ ಜಾಸ್ತಿಯಾಗಿ ಕೆಎಂಎಫ್ ಶಾಶ್ವತವಾಗಿ ಮುಚ್ಚಿಹೋಗತ್ತೆ. ಇದು ಕರ್ನಾಟಕದ ಜನತೆಗೆ ಗೊತ್ತಿದೆ. ದಯವಿಟ್ಟು ಈ ರೀತಿ ವ್ಯರ್ಥ ಆಲಾಪನೆಯನ್ನು ಮಾಡಬೇಡಿ. ನೀವು ಗೋಹತ್ಯೆ ಮಾಡುವವರ ಪರವಿದ್ದೀರಿ ಎಂದು ಕರ್ನಾಟಕದ ಜನತೆಗೂ ಗೊತ್ತಿದೆ. ನಿಮ್ಮ ಯಾವುದೇ ಆರೋಪಗಳಿಗೆ ರಾಜ್ಯದ ಜನತೆ ಸೊಪ್ಪು ಹಾಕಲ್ಲ ಎಂದರು.

ಸುದ್ದಿಗೋಷ್ಠಿ ಯಲ್ಲಿ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್.ರವಿಕುಮಾರ್, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಮೈಸೂರು ನಗರಾಧ್ಯಕ್ಷ ಟಿ.ಎಸ್.ಶ್ರೀ ವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳ ಸೋಮಶೇಖರ್, ವಕ್ತಾರರಾದ ಎಂ.ಎ.ಮೋಹನ್, ಮಿರ್ಲೆ ಶ್ರೀ ನಿವಾಸಗೌಡ, ಡಾ.ಕೆ.ವಸಂತ್ ಕುಮಾರ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಕೇಬಲ್ ಮಹೇಶ್, ಪ್ರದೀಪ್ ಕುಮಾರ್, ಮೈಸೂರು ನಗರಪಾಲಿಕೆ ಮೇಯರ್ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!