ಹೊಸದಿಗಂತ ವರದಿ,ಮೈಸೂರು:
ಎಲ್ಲೋ ಕೂತು ಶಕ್ತಿ ಪ್ರದರ್ಶನ ಮಾಡುವುದರಿಂದ ಮೀಸಲಾತಿ ಪಡೆಯಲು ಸಾಧ್ಯವಿಲ್ಲ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಮಂಗಳವಾರ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಪ್ರಸ್ತುತ ರಾಜ್ಯದಲ್ಲಿ ಮೀಸಲಾತಿ ವಿವಾದ ಭುಗಿಲೆದ್ದಿದೆ. ಮೀಸಲಾತಿಯ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆ ಮಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ದೇಶದಲ್ಲಿ ಸಂವಿಧಾನ ಇದೆ. ಯಾವುದೇ ಜಾತಿಗೆ ಮೀಸಲಾತಿ ಕೊಡಬೇಕಾಗಿರುವುದು ಕೇಂದ್ರದ ಪರಮಾಧಿಕಾರ. ಮೀಸಲು ಕೊಡಬೇಕಾದರೆ ರಾಜ್ಯ ಸರಕಾರ ಸಮಿತಿ ರಚಿಸಿ, ವರದಿ ನೀಡಬೇಕು. ಕೇಂದ್ರ ಸರಕಾರ ಅದನ್ನು ಅಧ್ಯಯನ ಮಾಡಬೇಕು. ನಂತರ ಸಂಸತ್ನಲ್ಲಿ ಚರ್ಚೆಯಾಗಿ ಅನುಮೋದನೆ ಪಡೆಯಬೇಕು. ಸಿಕ್ಕಸಿಕ್ಕವರೆಲ್ಲಾ ಮೀಸಲು ಕೇಳಿದರೆ ಕೊಡಲು ಬರುವುದಿಲ್ಲ ಎಂದು ಹೇಳಿದರು.
ಮೀಸಲಾತಿ ವಿಷಯ ದೊಡ್ಡ ಸಮಸ್ಯೆ ಆಗಿದೆ. ರಾಜಕಾರಣಿಗಳು ಯಾರು ಬಂದು ಕೇಳಿದರು ಮೀಸಲಾತಿ ನೀಡುವ ಭರವಸೆ ನೀಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಏನು ನಿರ್ಧಾರ ತೆಗೆದುಕೊಂಡಿದೆ..? ಕೇಂದ್ರದ ಅಧಿಕಾರವೇನು..? ರಾಜ್ಯ ಸರಕಾರ ಏನು ಮಾಡಬೇಕೆಂದು ಯಾರು ಯೋಚಿಸುತ್ತಿಲ್ಲ ಎಂದು ಕಿಡಿಕಾರಿದರು.
ಇಂದು ಎಲ್ಲರೂ ಸಂವಿಧಾನದ ಬಗ್ಗೆ ತಿಳಿಯಬೇಕಾಗಿದೆ. ಇದಕ್ಕಾಗಿ ನಾಗಮೋಹನ್ ದಾಸ್ ಕನ್ನಡಕ್ಕೆ ಸಂವಿಧಾನ ಅನುವಾಸಿದ್ದಾರೆ. ಸದರಿ ಸಂವಿಧಾನ ಓದು ಎಂಬ ಪುಸ್ತಕವನ್ನು 16 ಸಾವಿರ ಅನುದಾನದಲ್ಲಿ 30 ಸಾವಿರ ಪ್ರತಿ ಮುದ್ರಣ ಮಾಡಲಾಗುತ್ತಿದೆ. ಆ ಪ್ರತಿಗಳನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರದಲ್ಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಸಂವಿಧಾನದಲ್ಲಿ ಏನಿದೆ ಎನ್ನುವುದನ್ನು ತಿಳಿಸಲಾಗುತ್ತದೆ ಎಂದು ತಿಳಿಸಿದರು.