ಪಿಎಫ್‌ಐ ನಿಷೇಧ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಎಚ್ಚರಿಕೆಯ ಸಂದೇಶ: ಕೇಂದ್ರ ಸಚಿವ ಜೋಶಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಪಿಎಫ್‌ಐ ನಿಷೇಧಿಸುವ ಮೂಲಕ ಕೇಂದ್ರ ಸರಕಾರ ರಾಷ್ಟ್ರದ ಸುರಕ್ಷತೆಗೆ ಆದ್ಯತೆ ನೀಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟನೆಗೆ ತಿಳಿಸಿದ ಅವರು, ಪಿಎಫ್‌ಐ ನಿಷೇಧದ ಮೂಲಕ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರಾಷ್ಟ್ರೀಯ ಸುರಕ್ಷತೆಯೇ ಸರ್ವೋಚ್ಛ ಆದ್ಯತೆಯಾಗಿದೆ. ಸಂಘಟನೆಯ ನಿಷೇಧದಿಂದ ರಾಷ್ಟ್ರೀಯ ಭದ್ರತೆಗೆ ಮತ್ತು ಸಾರ್ವಭೌಮತೆಗೆ ಅಪಾಯಕಾರಿಯಾಗಿದ್ದ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ದೇಶಕ್ಕಾಗಿ ಎಂತಹ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ಕೈವಾಡ ಇರುವ ಬಗ್ಗೆ ನಾನು ಈ ಹಿಂದೆ ಆರೋಪಿಸಿದ್ದೆ. ಈ ಬಗ್ಗೆ ತನಿಖೆ ತೀವ್ರಗೊಳಿಸುವಂತೆ ಸಹ ಸೂಚಿಸಿದ್ದೆ. ಪಿಎಫ್‌ಐ, ಎಸ್‌ಡಿಪಿಐ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಸಿಎಂ ಬೊಮ್ಮಾಯಿ ಅವರ ಜೊತೆ ಚರ್ಚಿಸಿದ್ದೆ. ಪಿಎಫ್ಐ ಮೇಲೆ ಸಂಘಟಿತ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾದಳ, ಜಾರಿ ನಿರ್ದೇಶನಾಲಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ನೂರಾರು ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿತ್ತು. ಪಿಎಫ್‌ಐ ಸಂಘಟನೆ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ಹಲವು ಸಾಕ್ಷ್ಯಗಳು ದೊರೆತ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!