ಪಿಎಫ್‌ಐ ನಿಷೇಧಕ್ಕೂ ಕರಾವಳಿಯ ಹತ್ಯೆಗೂ ಇದೆ ನಂಟು: ಅಧಿಸೂಚನೆಯಲ್ಲಿ ಹೆಸರು ಉಲ್ಲೇಖ!

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಭಯೋತ್ಪಾದಕ ಗುಂಪುಗಳ ಜೊತೆ ನಂಟು ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿರುವುದಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ )ಮತ್ತು ಸಹ ಸಂಘಟನೆಗಳನ್ನು 5 ವರ್ಷಗಳ ಕಾಲ ನಿಷೇಧಿಸಲಾಗಿದೆ . ಉತ್ತರಪ್ರದೇಶ, ಕರ್ನಾಟಕ, ಗುಜರಾತ್‌ನಂತಹ ರಾಜ್ಯಗಳು ಈ ಸಂಘಟನೆಯ ಮೇಲೆ ನಿಷೇಧ ಹೇರಬೇಕೆಂದು ಶಿಫಾರಸು ಮಾಡಿದ್ದವು ಎಂಬುದಾಗಿ ಕೇಂದ್ರ ಗೃಹಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪಿಎಫ್‌ಐ ಲಷ್ಕರ್ ತೊಯ್ಬಾ, ಜೈಶ್ ಮೊಹಮ್ಮದ್, ಸಿಮಿ, ಅಲ್‌ಖಾಯಿದಾ ಮತ್ತು ಇತರ ನಿಷೇಧಿತ ಗುಂಪುಗಳ ಜೊತೆ ಕೈಜೋಡಿಸಿದೆ. ಪಿಎಫ್‌ಐ ಮತ್ತು ಇತರ ೮ಸಹಸಂಘಟನೆಗಳು ಶಾಂತಿ, ಕೋಮುಸಾಮರಸ್ಯಕ್ಕೆ ಗಂಭೀರ ಬೆದರಿಕೆಯೊಡ್ಡುವ ಜೊತೆಗೆ ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಸವಾಲೊಡ್ಡುವಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಶಾಮೀಲಾಗಿವೆ ಎಂದು ವಿವರಿಸಲಾಗಿದೆ.

ರೆಹಾಬ್ ಇಂಡಿಯಾ ಫೌಂಡೇಶನ್(ಆರ್‌ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‌ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್(ಎಐಐಸಿ), ನ್ಯಾಷನಲ್ ಕಾನೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್(ಎಸ್‌ಸಿಎಚ್‌ಆರ್‌ಒ), ನ್ಯಾಷನರ್ ವುಮನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಅಂಡ್ ರೆಹಾಬ್ ಫೌಂಡೇಶನ್ ಕೇರಳ ನಿಷೇಧಿಸಲ್ಪಟ್ಟ ಸಂಘಟನೆಗಳಾಗಿವೆ.

ಇವು ಸಮುದಾಯದಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸಿ ಆ ಮೂಲಕ ಮತಾಂಧತೆಯನ್ನು ತುಂಬಿ ತೀವ್ರವಾದಿ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿರುವುದನ್ನು ಭದ್ರತಾ ಪಡೆಗಳು ಕಂಡುಕೊಂಡಿವೆ. ಈಗಾಗಲೇ ಕೆಲವು ಪಿಎಫ್‌ಐ ಕಾರ್ಯಕರ್ತರು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳನ್ನು ಸೇರಿರುವುದನ್ನೂ ಗುರುತಿಸಲಾಗಿದೆ ಎಂದು ಅದರಲ್ಲಿ ವಿವರಿಸಲಾಗಿದೆ.

ಪಿಎಫ್‌ಐಯ ಸ್ಥಾಪಕ ಸದಸ್ಯರು ಹಿಂದಿನ ಭಯೋತ್ಪಾದಕ ಗುಂಪಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ(ಸಿಮಿ)ದ ನಾಯಕರಾಗಿದ್ದು, ಪಿಎಫ್‌ಐ ಭಯೋತ್ಪಾದಕ ಸಂಘಟನೆ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಜೊತೆಗೆ ಮತ್ತು ಜಾಗತಿಕ ಭಯೋತ್ಪಾದಕ ಗುಂಪಾದ ಐಸಿಸ್‌ನಂತಹ ಗುಂಪುಗಳ ಜೊತೆಗೂ ನಂಟು ಹೊಂದಿದೆ.ಪಿಎಫ್‌ಐಯ ಕಾರ್ಯಕರ್ತರು ಸಿರಿಯಾ, ಇರಾಕ್,ಅಫ್ಘಾನಿಸ್ಥಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ಈ ಪೈಕಿ ಕೆಲವರು ಹತರಾಗಿದ್ದಾರೆ ಇಲ್ಲವೇ ಬಂತರಾಗಿದ್ದಾರೆ ಎಂಬುದನ್ನು ಅಸೂಚನೆಯಲ್ಲಿ ಬೊಟ್ಟು ಮಾಡಲಾಗಿದೆ.

ಪಿಎಫ್‌ಐ ಭಾರತೀಯ ಸಾಂವಿಧಾನಿಕ ಅಧಿಕಾರದೆಡೆಗೆ ಅಗೌರವ ಹೊಂದಿದ್ದು, ಹೊರಗಿನಿಂದ ಹಣಕಾಸು ಮತ್ತು ಸೈದ್ಧಾಂತಿಕ ವಿಚಾರಗಳನ್ನು ಪಡೆಯುತ್ತಿದೆ.ಇದು ದೇಶದ ಆಂತರಿಕ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ .ಈಗಾಗಲೇ ಹಲವು ಬರ್ಬರ ಹತ್ಯೆಗಳಲ್ಲಿ ,ಪ್ರಮುಖ ಸಾರ್ವಜನಿಕ ವ್ಯಕ್ತಿಗಳನ್ನು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಗುರಿಯಾಗಿರಿಸಿ ಸೋಟಕಗಳನ್ನು ಸಂಗ್ರಹಿಸುವುದರಲ್ಲಿ ತೊಡಗಿದೆ. ಕೇರಳ, ತಮಿಳ್ನಾಡು, ಕರ್ನಾಟಕಗಳಲ್ಲಿ ಅನೇಕ ಹತ್ಯೆಗಳಲ್ಲಿ ಪಿಎಫ್‌ಐ ವ್ಯಕ್ತಿಗಳು ಶಾಮೀಲಾಗಿರುವುದನ್ನು ಮತ್ತು 2010 ರಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ವಿವಾದಾತ್ಮಕ ಪ್ರಶ್ನೆಯೊಂದನ್ನು ನೀಡಲಾಗಿದ್ದನ್ನೇ ನೆವವಾಗಿಸಿ ಉಪನ್ಯಾಸಕರ ಕೈ ಕಡಿದಿರುವುದನ್ನು ಉಲ್ಲೇಖಿಸಲಾಗಿದೆ.

2021 ರಲ್ಲಿ ಕೇರಳದಲ್ಲಿ ಸಂಜಿತ್, 2019 ರಲ್ಲಿ ತಮಿಳ್ನಾಡಿನಲ್ಲಿ ವಿ.ರಾಮಲಿಂಗಮ್, 2021 ರಲ್ಲಿ ಕೇರಳದಲ್ಲಿ ನಂದು , 2018 ರಲ್ಲಿ ಕೇರಳದ ಅಭಿಮನ್ಯು, 2017 ರಲ್ಲಿ ಕೇರಳದಲ್ಲಿ ಬಿಬಿನ್, 2017 ರಲ್ಲಿ ಕರ್ನಾಟಕದ ಶರತ್ ಮಡಿವಾಳ, 2019 ರಲ್ಲಿ ಕರ್ನಾಟಕದಲ್ಲಿ ಆರ್.ರುದ್ರೇಶ್ , 2016 ರಲ್ಲಿ ಕರ್ನಾಟಕದ ಪ್ರವೀಣ್ ಪೂಜಾರಿ, 2016 ರಲ್ಲಿ ತಮಿಳ್ನಾಡಿನಲ್ಲಿ ಶಶಿ ಕುಮಾರ್, 2022 ರಲ್ಲಿ ಕರ್ನಾಟಕದಲ್ಲಿ ಪ್ರವೀಣ್ ನೆಟ್ಟಾರು ಅವರ ಕ್ರೂರ ಹತ್ಯೆಗಳಲ್ಲಿ ಪಿಎಫ್‌ಐ ಕೈವಾಡವನ್ನು ಬೊಟ್ಟು ಮಾಡಲಾಗಿದೆ.

ತಮ್ಮ ಯೋಜಿತ ದೇಶಘಾತಕ ಚಟುವಟಿಕೆಗಳಿಗೆ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ, ಹವಾಲಾ ಜಾಲ, ದೇಣಿಗೆ ಮೂಲಕ ದೇಶ ವಿದೇಶಗಳಿಂದ ಹಣ ಸಂಗ್ರಹಿಸುತ್ತಿರುವ ಗುಂಪು , ಅನಂತರ ಈ ಹಣವನ್ನು ಬಹುಖಾತೆಗಳ ಮೂಲಕ ಸಮಗ್ರಗೊಳಿಸಿ ಕಾನೂನುಬದ್ಧ ವಾಗಿಸುತ್ತಾಬಂದಿವೆ.ಅನಂತರ ಈ ಹಣದಿಂದಲೇ ವಿವಿಧ ಕಾನೂನು ಬಾಹಿರ ಕ್ರಿಮಿನಲ್ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಬಳಸಲಾಗಿದೆ . ಪಿಎಫ್‌ಐ ಪರವಾಗಿ ಠೇವಣಿ ಇಡಲಾಗಿರುವ ಖಾತೆಗಳ ವ್ಯಕ್ತಿಗಳ ಆರ್ಥಿಕ ಹಿನ್ನೆಲೆಗೂ , ಅಲ್ಲಿರುವ ಮೊತ್ತಕ್ಕೂ ಹೊಂದಾಣಿಕೆಯಾಗುತ್ತಿಲ್ಲ ಎಂಬುದನ್ನು ಗೃಹಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ಸಹಸಂಘಟನೆಗಳ ಮೂಲಕ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ಇಮಾಮರು, ವಕೀಲರು ಮತ್ತು ದುರ್ಬಲವರ್ಗದ ಜನರನ್ನು ಆಕರ್ಷಿಸಲು ಮತ್ತು ಪ್ರಭಾವ ವಿಸ್ತರಿಸಲು , ನಿಧಿ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಲು ಯತ್ನಿಸಲಾಗಿದೆ ಎಂದದು ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!