ಪ್ರವೀಣ್ ಹತ್ಯೆ ಹಿಂದೆ ಪಿಎಫ್‍ಐ ಕೈವಾಡ: ನಳಿನ್‍ಕುಮಾರ್ ಕಟೀಲ್ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು: 
ಬಿಜೆಪಿ ಯುವಮೋರ್ಚಾ ನಾಯಕ ಪ್ರವೀಣ್ ರನ್ನು ಹತ್ಯೆಗೈದ ಆರೋಪಿಗಳನ್ನು ಗುರುತಿಸಿ ಬಂಧಿಸುವ ಪ್ರಕ್ರಿಯೆ ಪೊಲೀಸರಿಂದ ನಡೆಯುತ್ತಿದೆ. ಇದರ ಹಿಂದಿನ ʼಶಕ್ತಿʼಗಳನ್ನು ಮಟ್ಟ ಹಾಕುವ ಕೆಲಸವಾಗಬೇಕು ಮತ್ತು ಅದನ್ನು ಸರಕಾರ ಸಮರ್ಥವಾಗಿ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಘಟನೆಯ ಹಿಂದೆ ಪಿಎಫ್‍ಐ ಕೈವಾಡ ಕಂಡುಬರುತ್ತಿದೆ. ಪಿಎಫ್‍ಐ ನಿಯಂತ್ರಣ ಮತ್ತು ನಿಷೇಧದ ವಿಚಾರ ಕೇಂದ್ರ ಸರಕಾರದ ಮುಂದಿದೆ. ಅದಕ್ಕೆ ಅಗತ್ಯ ಪ್ರಕ್ರಿಯೆಗಳನ್ನು ಕೇಂದ್ರ ಕೈಗೊಳ್ಳಲಿದೆ. ಪಿಎಫ್‍ಐ ನಿಷೇಧಿಸಲು ಒತ್ತಾಯಿಸುವುದಾಗಿ ತಿಳಿಸಿದರು.
ಪ್ರವೀಣ್ ಮನೆಗೆ ಮುಖ್ಯಮಂತ್ರಿಗಳು ಮತ್ತು ನಾನು ಇವತ್ತು ಭೇಟಿ ಕೊಡಲಿದ್ದೇವೆ. ಪಕ್ಷವು ಅವರಿಗೆ ಸಾಂತ್ವನ ಹೇಳುವುದಲ್ಲದೆ, ಅವರ ಕುಟುಂಬಕ್ಕೆ ಬೇಕಾದ ಜವಾಬ್ದಾರಿಯನ್ನು ವಹಿಸಲಿದೆ. ಸರಕಾರ ಅವರ ಆಶಯಗಳನ್ನು ಈಡೇರಿಸಲಿದೆ ಎಂದು ತಿಳಿಸಿದರು.
ನಿನ್ನೆ ದುಃಖ ಮತ್ತು ಭಾವನೆ ಹೊರಹಾಕುವ ಸಂದರ್ಭದಲ್ಲಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಇದು ದೇಶದೆಲ್ಲೆಡೆ ಇರುವ ಜಿಹಾದಿ ಮಾನಸಿಕತೆ ವಿರುದ್ಧ ನಡೆಯುತ್ತಿರುವ ಹೋರಾಟ. ಜಿಹಾದಿ ಹೆಸರಿನಲ್ಲಿ ಕೋಮುಗಲಭೆ ಹಾಗೂ ಅಶಾಂತಿ ನಿರ್ಮಿಸಲು ಯತ್ನಿಸಲಾಗುತ್ತಿದೆ. ಇದರ ವಿರುದ್ಧ ದೇಶವ್ಯಾಪಿ ಹೋರಾಟ ನಡೆಯಬೇಕಿದೆ ಎಂದು ಹೇಳಿದರು.
ಪಕ್ಷಕ್ಕೆ ರಾಜೀನಾಮೆ ಕೊಟ್ಟವರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದ ಅವರು, ರಾಜ್ಯದಲ್ಲೂ ಕಠಿಣ ಕಾನೂನಿನ ಅವಶ್ಯಕತೆ ಇದೆ. ಕೇಂದ್ರವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ ಕೈಗೊಂಡ ತೀರ್ಮಾನದ ಮಾದರಿಯಲ್ಲೇ ಇಲ್ಲಿ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಅಂಥ ನಿರ್ಣಯಗಳನ್ನು ನಮ್ಮ ಸರಕಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!