ಫಾರ್ಮಾ ಕಂಪನಿಗಳು ವೈದ್ಯರಿಗೆ ಆಮಿಷಜಾಲ ಹರಡುವುದನ್ನು ನಿಯಂತ್ರಿಸಲಿದೆ ಈ ನಿಯಮ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಯಾವ ಸರ್ಕಾರವೂ ‘ಫಾರ್ಮಾ ಲಾಬಿ’ಯನ್ನು ನಿಯಂತ್ರಿಸುವ ಕಾರ್ಯಕ್ಕೆ ಹೋಗುವುದಿಲ್ಲ, ಏಕೆಂದರೆ ಅದು ಅಷ್ಟು ಪ್ರಬಲವಾದದ್ದು- ಹೀಗೊಂದು ಅಭಿಪ್ರಾಯ ಜನರ ನಡುವೆ ದಟ್ಟವಾಗಿದೆ. ಆದರೆ, ಈ ಬಾರಿಯ ಬಜೆಟ್ ಭಾಗವಾಗಿ ತಂದಿರುವ ತಿದ್ದುಪಡಿಯೊಂದು ಔಷಧ ಉದ್ದಿಮೆ ವಲಯದ ಅನೈತಿಕ ಕಾರ್ಯವೊಂದನ್ನು ಸ್ಪಷ್ಟವಾಗಿ ನಿರ್ಬಂಧಿಸುವತ್ತ ಹೆಜ್ಜೆ ಇಟ್ಟಿದೆ.

ಫಾರ್ಮಾ ಕಂಪನಿಗಳು ತಾವು ವೈದ್ಯವೃಂದಕ್ಕೆ ಪುಕ್ಕಟೆಯಾಗಿ ಕೊಡುತ್ತಿದ್ದ ಕೆಲವು ಸೌಲಭ್ಯಗಳ ಖರ್ಚನ್ನು ತೋರಿಸಿ, ತಮ್ಮ ನಷ್ಟ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ತೆರಿಗೆ ಕಡಿತ ಪಡೆಯುವುದಕ್ಕೆ ಅಂಥ ಲೆಕ್ಕವನ್ನು ಉಪಯೋಗಿಸುತ್ತಿದ್ದವು. ಬರುವ ಏಪ್ರಿಲ್ 1ರಿಂದ ಈ ರೀತಿ ಮಾಡುವಂತಿಲ್ಲ. ವೈದ್ಯರಿಗೆ ವಿದೇಶಕ್ಕೆ ಕರೆದುಕೊಂಡುಹೋಗಿದ್ದನ್ನೋ ಅಥವಾ ಇನ್ಯಾವುದೋ ಸೌಲಭ್ಯಕ್ಕೆ ವ್ಯಯಿಸಿದ್ದನ್ನೋ ಲೆಕ್ಕದಲ್ಲಿ ತೋರಿಸಿ ಅದನ್ನು ತೆರಿಗೆ ಕಡಿತದ ಮೊತ್ತದ ಭಾಗವಾಗಿಸುವಂತಿಲ್ಲ.

ಹಾಗಂತ ಫಾರ್ಮಾ ಕಂಪನಿಗಳ ಇಂಥದೊಂದು ಅಭ್ಯಾಸ ನಿಲ್ಲಿಸುವ ನಿಟ್ಟಿನಲ್ಲಿ ಹಲವು ನಿಯಮಗಳು ಅದಾಗಲೇ ಬಂದಿವೆ. ಆದರೆ ತೆರಿಗೆ ಕಾನೂನಿನಲ್ಲಿ ಇದನ್ನು ಸ್ಪಷ್ಟವಾಗಿ ನಿರ್ಬಂಧಿಸುವ ನಿಯಮಗಳ ಕೊರತೆಯಿಂದ ಇದು ಹಾಗೆಯೇ ನಡೆದುಕೊಂಡುಬಂದಿತ್ತು. ಕೆಲವೊಮ್ಮೆ ತೆರಿಗೆ ಅಧಿಕಾರಿಗಳು ಈ ವಿನಾಯತಿ ಕೊಡುವುದಕ್ಕೆ ಆಕ್ಷೇಪಿಸಿದಾಗ ಫಾರ್ಮಾ ಕಂಪನಿಗಳು ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದೂ ಇದೆ.

ಈಗ ಇಂಥ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.

2009ರಲ್ಲೇ ಭಾರತೀಯ ಮೆಡಿಕಲ್ ಕೌನ್ಸಿಲ್, ವೈದ್ಯರು ಫಾರ್ಮಾ ಕಂಪನಿಗಳಿಂದ ಉಡುಗೊರೆ, ಆತಿಥ್ಯ, ಪ್ರವಾಸದಂಥ ಸೌಲಭ್ಯಗಳನ್ನು ಪಡೆಯುವುದು ಅನೈತಿಕ ಎಂದು ಹೇಳಿತ್ತು. ಈ ಪದ್ಧತಿಯಿಂದ ನಿರ್ದಿಷ್ಟ ಕಂಪನಿಯ ಔಷಧಗಳನ್ನು ಉತ್ತೇಜಿಸುವ ಪರಿಪಾಠ ಬೆಳೆಯುತ್ತದೆ ಎಂದು ಹೇಳಿತ್ತು.

2012ರಲ್ಲಿ ಕೇಂದ್ರದ ಪ್ರತ್ಯಕ್ಷ ತೆರಿಗೆಗಳ ಬೋರ್ಡ್, ವೈದ್ಯರು ಹೀಗೆ ಪಡೆದಿರುವ ಉಡುಗೊರೆಗಳನ್ನು ತೆರಿಗೆಗೊಳಪಡುವ ಆದಾಯವಾಗಿ ಘೋಷಿಸಬೇಕು ಹಾಗೂ ಫಾರ್ಮಾ ಕಂಪನಿಗಳು ತಮ್ಮ ಲೆಕ್ಕದಲ್ಲಿ ಈ ಖರ್ಚನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಘೋಷಿಸಿತು.

ಆದರೂ, ಫಾರ್ಮಾ ಕಂಪನಿಗಳು ವೈದ್ಯರಿಗೆ ಉಡುಗೊರೆಗಳನ್ನು ನೀಡುವುದನ್ನು ನಿರ್ಬಂಧಿಸುವ ನಿಖರ ಕಾನೂನು ಇಲ್ಲವಾಗಿದ್ದರಿಂದ ಈ ವ್ಯವಹಾರ ನಡೆದುಕೊಂಡೇ ಇತ್ತು. ಬಜೆಟ್ 2022ರ ವಿತ್ತಿಯ ಮಸೂದೆಯ ತಿದ್ದುಪಡಿಯೊಂದು ಇಂಥ ವ್ಯವಹಾರವನ್ನು ನಿರುತ್ತೇಜಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!