ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದೆ ಮದ್ರಾಸ್ ಐ ಸೋಂಕು ಪಸರಿಸಿತ್ತು. ಈಗ ಮತ್ತೆ ಪಿಂಕ್ ಐ ರೂಪದಲ್ಲಿ ಈ ಸೋಂಕು ಹರಡಲು ಆರಂಭವಾಗಿದೆ.
ಡೆಂಘೀ ಬೆನ್ನಲ್ಲೇ ಸಿಲಿಕಾನ್ ಸಿಟಿ ಮಂದಿಗೆ ಈಗ ಪಿಂಕ್ ಐ ಸಮಸ್ಯೆ ಶುರುವಾಗಿದೆ. ಇದಕ್ಕೆ ಮಕ್ಕಳೇ ಹೆಚ್ಚು ಗುರಿಯಾಗುತ್ತಿರುವ ಕಾರಣ ಪೋಷಕರಲ್ಲಿ ಆತಂಕ ಶುರುವಾಗಿದೆ. ಬದಲಾಗುತ್ತಿರುವ ಹವಾಮಾನವೇ ಪಿಂಕ್ ಐ ಕಾಯಿಲೆ ಹೆಚ್ಚಾಗಲು ಕಾರಣ ಎಂದು ತಜ್ಞ ವೈದ್ಯರು ಹೇಳಿದ್ದಾರೆ.
ಕಣ್ರೆಪ್ಪೆ ಹಾಗೂ ಕಣ್ಣುಗುಡ್ಡೆಯನ್ನು ಸುತ್ತುವರೆದಿರುವ ಪಾರದರ್ಶಕ ಪೊರೆಯಾದ ಕಾಂಜಂಕ್ಟಿವಾ ಊದಿಕೊಂಡು ಸೋಂಕಿನಿಂದ ಕಣ್ಣುಗಳು ಕೆಂಪಾಗುತ್ತಿವೆ. ಸೋಂಕಿತ ರಕ್ತನಾಳಗಳು ಊದಿಕೊಳ್ಳುತ್ತವೆ. ಇದರಿಂದಾಗಿ ಕಣ್ಣಿನ ಒಳಭಾಗದ ಬಿಳಿಭಾಗವು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಕಣ್ಣು ಕೆಂಪಾಗುವುದು, ತುರಿಕೆ, ಕಣ್ಣಿನಲ್ಲಿ ಅತಿಯಾಗಿ ನೀರು ಸೋರುವುದು, ಕಣ್ಣುಗಳಲ್ಲಿ ಚುಚ್ಚಿದಂತಹ ಅನುಭವ ಆಗುತ್ತದೆ.
ಹೇಗೆ ತಡೆಯೋದು?
ಐಬುಪ್ರೊಫೇನ್ ಅಥವಾ ಕಣ್ಣಿನ ನೋವು ನಿವಾರಕಗಳನ್ನು ಬಳಸುವುದು, ಲೂಬ್ರಿಕೇಟಿಂಗ್ ಕಣ್ಣಿನ ಹನಿಗಳನ್ನು ಬಳಸಿ, ಕೆಲವು ನಿಮಿಷಗಳ ಕಾಲ ಕಣ್ಣುಗಳ ಮೇಲೆ ಬೆಚ್ಚಗಿನ, ಒದ್ದೆಯಾದ ಬಟ್ಟೆಯನ್ನು ಹಾಕುವುದು, ಶುದ್ಧವಾದ ಬಟ್ಟೆಯನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ನಂತರ ಅದರಲ್ಲಿರುವ ಸಂಪೂರ್ಣ ನೀರನ್ನು ಹಿಂಡಿ ತೆಗೆದು ಬಟ್ಟೆಯನ್ನು ಕಣ್ಣುಗಳ ಮೇಲಿರಿಸಿ, ಇದನ್ನು ಆಗಾಗ್ಗೆ ಪುನರಾವರ್ತಿಸುವುದರಿಂದ ಉರಿ ಕಡಿಮೆಯಾಗಿ ಕಣ್ಣುಗಳಿಗೆ ಆರಾಮವಾಗುತ್ತದೆ.
ಸೋಂಕು ಹರಡದಂತೆ ಪ್ರತೀ ಬಾರಿ ಸ್ವಚ್ಛವಾದ ಬಟ್ಟೆಯನ್ನೇ ಬಳಸಬೇಕು, ಎರಡೂ ಕಣ್ಣುಗಳಿಗೂ ಪಿಂಕ್ ಐ ತಗುಲಿದ್ದರೆ ಕಣ್ಣಿಗೆ ಬೇರೆ ಬೇರೆ ಬಟ್ಟೆಯನ್ನು ಬಳಸಿ, ನಿಮ್ಮ ಕಣ್ಣುರೆಪ್ಪೆಗಳು ಒಟ್ಟಿಗೆ ಅಂಟಿಕೊಂಡಿದ್ದರೆ, ಬೆಚ್ಚಗಿನ ನೀರಿನಲ್ಲಿ ಒದ್ದೆಮಾಡಿದ ಬಟ್ಟೆಯು ಲೋಳೆಯನ್ನು ಸಡಿಲಗೊಳಿಸುತ್ತದೆ ಹಾಗೂ ಇದರಿಂದ ಕಣ್ರೆಪ್ಪೆಯನ್ನು ಬಿಡಿಸಬಹುದು, ಇದು ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತರು ಕೈಗಳನ್ನು ಆಗಾಗ್ಗೆ ತೊಳೆಯಬೇಕು, ಇತರರಿಗೆ ಹರಡದಂತೆ ಜಾಗರೂಕತೆ ವಹಿಸಬೇಕು.
ವಿಶೇಷವಾಗಿ ಕಣ್ಣುಗಳನ್ನು ಸ್ಪರ್ಶಿಸಿದ ನಂತರ ಕೈಗಳ ಸ್ವಚ್ಛತೆಯ ಕಡೆಗೆ ಆದ್ಯತೆ ನೀಡಬೇಕು,ಕಣ್ಣುಗಳು ಸಹಜ ಸ್ಥಿತಿಗೆ ಬರುವವರೆಗೆ ನಿಮ್ಮ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಬಾರದು, ಕಣ್ಣುಗಳಲ್ಲಿ ತುರಿಕೆ ಕಾಣಿಸಿಕೊಂಡರೂ ಉಜ್ಜಬಾರದು, ಒಂದು ವೇಳೆ ಉಜ್ಜಿದರೆ ಕಣ್ಣಿನ ಆರೋಗ್ಯ ಇನ್ನಷ್ಟು ಹದಗೆಡುವುದಲ್ಲದೆ ಸೋಂಕು ಹರಡುವ ಪ್ರಮಾಣ ಹೆಚ್ಚಬಹುದು, ಸೋಂಕಿತರು ಈಜಾಡಲು ಹೋಗದೇ ಇರುವುದು ಉತ್ತಮ, ಈಜುಕೊಳದಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಯಾವುದೇ ಸಮಸ್ಯೆಯಾದರೂ ಮೊದಲು ವೈದ್ಯರನ್ನು ಭೇಟಿ ಮಾಡಿ.