ಗುಜರಾತ್‌ – ರಾಜಸ್ಥಾನ ಫೈನಲ್‌ ಹಣಾಹಣಿ: ಐಪಿಎಲ್‌ ನಲ್ಲಿಂದು ನೂತನ ಚಾಂಪಿಯನ್ನರ ನಿರ್ಧಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್ 15ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು. ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ನೂತನ ಚಾಂಪಿಯನ್ನರು ಹೊರಹೊಮ್ಮಲಿದ್ದಾರೆ.
ಟೂರ್ನಿಯುದ್ದಕ್ಕೂ ಅದ್ಧೂರಿ ಪ್ರದರ್ಶನ ನೀಡಿ ಪ್ರಶಸ್ತಿ ಸುತ್ತು ಪ್ರವೇಶಿಸಿರುವ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಪಟ್ಟಕ್ಕಾಗಿ ಇಂದು ಹೋರಾಟ ನಡೆಸಲಿವೆ.
ಇಂದು ರಾತ್ರಿ 8ಕ್ಕೆ ಪಂದ್ಯ ಆರಂಭವಾಗಲಿದೆ. ಚೊಚ್ಚಲ ಬಾರಿಗೆ ಐಪಿಎಲ್‌ ನಲ್ಲಿ ಭಾಗಿಯಾಗಿ ಮೊದಲ ಪ್ರಯತ್ನದಲ್ಲೇ ಫೈನಲ್ ಗೆ ಲಗ್ಗೆ ಇಟ್ಟಿರುವ ಗುಜರಾತ್ ಟೈಟಾನ್ಸ್ ಕಪ್‌ ಎತ್ತಿಹಿಡಿಯುವ ನಿರೀಕ್ಷೆ ಹುಟ್ಟಿಸಿದೆ. 2008ರ ಬಳಿಕ ಈದೇ ಮೊದಲ ಬಾರಿ ಪ್ರಶಸ್ತಿ ಸುತ್ತಿನಲ್ಲಿ ಕಣಕ್ಕಿಳಿಯುತ್ತಿರುವ ರಾಜಸ್ಥಾನ ರಾಯಲ್ಸ್ ಗೆದ್ದು ಎರಡನೇ ಬಾರಿಗೆ ಕಪ್‌ ಎತ್ತಿಹಿಡಿಯುವ ಉತ್ಸಾಹದಲ್ಲಿದೆ.
ಗುಜರಾತ್ ಟೈಟಾನ್ಸ್‌ ಬ್ಯಾಟಿಂಗ್‌- ಬೌಲಿಂಗ್‌ ಎರಡೂ ವಿಭಾಗದಲ್ಲಿ ಬಲಿಷ್ಠವಾಗಿದೆ. ಹಾರ್ದಿಕ್‌ ಪಾಂಡ್ಯ ನಾಯಕತ್ವದಡಿ ತಂಡವು ಎಲ್ಲಾ ವಿಭಾಗಗಳಲ್ಲಿಯೂ ಗಮನಾರ್ಹ ಪ್ರದರ್ಶನ ತೋರಿದೆ. ಅಗ್ರ ಕ್ರಮಾಂಕದಲ್ಲಿ ಶುಭಮನ್ ಗಿಲ್, ವೃದ್ಧಿಮಾನ್ ಸಾಹಾ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ.
ಬಲಿಷ್ಠ ಮಧ್ಯಮ ಕ್ರಮಾಂಕದ ಕೊಡುಗೆಗಳಿಂದಲೇ ತಂಡ ಇಂದು ಫೈನಲ್‌ ಹಂತದವರೆಗೆ ತಲುಪಿದೆ. ಡೇವಿಡ್‌ ಮಿಲ್ಲರ್‌, ಹಾರ್ದಿಕ್‌ ಪಾಂಡ್ಯಾ, ರಾಹುಲ್‌ ತೆವಾಟಿಯಾ, ರಶೀದ್‌ ಖಾನ್‌ ರನ್ನು ಕಟ್ಟಿಹಾಕುವುದೇ ರಾಜಸ್ಥಾನ ಬೌಲರ್‌ ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಾಯಲ್ಸ್‌ನ ಬಲಿಷ್ಠ ಬ್ಯಾಟಿಂಗ್‌ ಪಡೆಗೆ ಮೊಹಮದ್ ಶಮಿ, ರಶೀದ್ ಖಾನ್, ಅಲ್ವಾರಿ ಜೋಸೆಫ್, ಯಶ್ ದಯಾಳ್, ಸಾಯಿ ಕಿಶೋರ್‌ ಇರುವ ಬೌಲಿಂಗ್‌ ವಿಭಾಗದಿಂದ ಕಠಿಣ ಸವಾಲು ಎದುರಾಗಲಿದೆ.
ಮತ್ತೊಂದೆಡೆ ರಾಜಸ್ಥಾನ್‌ ರಾಯಲ್ಸ್‌ ಸಾಂಘಿಕ ಪ್ರದರ್ಶನ ನೀಡಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಆರೆಂಜ್‌ ಹಾಗೂ ಪರ್ಪಲ್‌ ಕ್ಯಾಪ್‌ ಎರಡೂ ರಾಜಸ್ಥಾನ ಆಟಗಾರರ ಪಾಲಾಗಿರುವುದು ಆಟಗಾರರ ಭರ್ಜರಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಪಂದ್ಯಾವಳಿಯಲ್ಲಿ ಇದುವರೆಗೆ ನಾಲ್ಕು ಶತಕ ಮತ್ತು ನಾಲ್ಕು ಅರ್ಧಶತಕಗಳೊಂದಿಗೆ 824 ರನ್ ಗಳಿಸಿರುವ ಜೋಸ್‌ ಬಟ್ಲರ್‌ ಗುಜರಾತ್‌ ಬೌಲರ್‌ ಗಳಲ್ಲಿ ಭಯ ಹುಟ್ಟುಹಾಕಿದ್ದಾರೆ. ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮಾಯರ್ ಸಿಡಿದು ನಿಂತರೆ ರಾಜಸ್ಥಾನದ ಟ್ರೋಫಿ ಗೆಲುವಿನ ಕನಸು ನೆರವೇರಲಿದೆ. 26 ವಿಕೆಟ್‌ ಗಳೊಂದಿಗೆ ‌ಪರ್ಪಲ್‌ ಕ್ಯಾಪ್‌ ಮುಡಿಗೇರಿಸಿಕೊಂಡಿರುವ ಯಜುವೇಂದ್ರ ಚಾಹಲ್, ಪ್ರಸಿಧ್ ಕೃಷ್ಣ, ಟ್ವೆಂಟ್ ಬೌಲ್ಟ್, ಆರ್.ಅಶ್ವಿನ್, ಒಬೆಡ್ ಮೆಕಾಯ್ ಫೈನಲ್‌ ನಲ್ಲಿಯೂ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ.
ಫೈನಲ್‌ ಪಂದ್ಯಕ್ಕೂ ಮುನ್ನ ರಣವೀರ್ ಸಿಂಗ್, ಎಆರ್ ರೆಹಮಾನ್ ಮತ್ತು ನೀತಿ ಮೋಹನ್ ಮೊದಲಾದ ಖ್ಯಾತನಾಮರು ಅದ್ಧೂರಿ ಸಮಾರೋಪ ಸಮಾರಂಭ ನೆರವೇರಿಸಿಕೊಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!