ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕುಶಾಲನಗರ:
ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಭರ್ತಿಯಾದ ಸಂದರ್ಭ ನಾಲ್ಕು ದ್ವಾರಗಳ ಮೂಲಕ ನದಿಗೆ ನೀರು ಹರಿಯುವ ಮನಮೋಹಕ ದೃಶ್ಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ಹಾರಂಗಿ ಜಲಾಶಯದ ಮುಂಭಾಗದಲ್ಲಿ ತೂಗು ಸೇತುವೆ ನಿರ್ಮಿಸಲು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಚಿಂತನೆ ನಡೆಸಿದ್ದಾರೆ.
ಹಾರಂಗಿಯ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಹಾರಂಗಿ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರು ಕೇವಲ ಉದ್ಯಾನವನ್ನು ಮತ್ತು ಸಂಗೀತ ಕಾರಂಜಿ ವೀಕ್ಷಿಸಿ ತೆರಳುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಅಣೆಕಟ್ಟೆಯಿಂದ ನೀರು ಬೀಳುವ ಮನಮೋಹಕವಾದ ದೃಶ್ಯ ವೀಕ್ಷಣೆಗೆ ಅಣೆಕಟ್ಟೆಯ ಮುಂಭಾಗದಲ್ಲಿ ತೂಗು ಸೇತುವೆ ನಿರ್ಮಿಸಿದರೆ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಡರಲ್ಲದೆ, ಈ ಸಂಬಂಧ ಕ್ರಿಯಾ ರೂಪಿಸುವಂತೆ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ಅವರಿಗೆ ಸೂಚನೆ ನೀಡಿದರು.
ಹಾರಂಗಿ ಅಣೆಕಟ್ಟೆಯ ಪ್ರದೇಶ 400 ಎಕರೆಗಳಷ್ಟಿದ್ದು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹಾರಂಗಿಯ ಬೃಂದಾವನದ ಅಭಿವೃದ್ಧಿ ಮತ್ತು ಪ್ರವಾಸಿಗರ ಆಕರ್ಷಣೆಗೆ ಅಗತ್ಯವಿರುವ ಇನ್ನಿತರ ಅಭಿವೃದ್ಧಿಗೆ ವಿಶೇಷ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್,ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷ ಜಯವರ್ಧನ, ಕುಡಾ ಅಧ್ಯಕ್ಷ ಎಂ.ಎಂ. ಚರಣ್ ಪಟ್ಟಣ ಪಂಚಾಯತಿ ಸದಸ್ಯ ಅಮೃತ್ರಾಜ್, ಪ್ರಮುಖರಾದ ವೈಶಾಕ್, ಪುಂಡರೀಕಾಕ್ಷ, ಶಿವಕುಮಾರ್, ಮುಳ್ಳುಸೋಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಚಲುವರಾಜ್, ಸದಸ್ಯ ಮಣಿಕುಮಾರ್, ಹಾರಂಗಿ ಮಣಿ ಮತ್ತಿತರರು ಇದ್ದರು.