ನೇಪಾಳದಲ್ಲಿ 4 ಮಂದಿ ಭಾರತೀಯರೂ ಸೇರಿದಂತೆ 22 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
3 ಮಂದಿ ಸಿಬ್ಬಂದಿಗಳು ಮತ್ತು 4 ಮಂದಿ ಭಾರತೀಯರನ್ನು ಒಳಗೊಂಡಂತೆ 22 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟ್ವಿನ್‌ ಎಂಜಿನ್‌ ವಿಮಾನವೊಂದು ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ.

ನೇಪಾಳದ ಮಸ್ತಾಂಗ್‌ ಜಿಲ್ಲೆಯ ಪರ್ವತ ಪ್ರದೇಶಗಳಲ್ಲಿ ವಿಮಾನ ನಾಪತ್ತೆಯಾಗಿರುವ ಕುರಿತು ಅಧಿಕಾರಿಗಳು ದೃಢಪಡಿಸಿದ್ದಾರೆ ಎನ್ನಲಾಗಿದೆ. ತಾರಾ ಏರ್ಸ್‌ ಗೆ ಸೇರಿದ ವಿಮಾನವು ಭಾನುವಾರ ಬೆಳಿಗ್ಗೆ 9:55ಕ್ಕೆ ಪೋಖರಾದಿಂದ ಜೋಮ್ಸಮ್‌ಗೆ ಹಾರಾಟವಾಗುತ್ತಿತ್ತು. ಮಸ್ತಾಂಗ್‌ ನ ಲೆಟೆ ಪ್ರದೇಶವನ್ನು ತಲುಪಿದ ನಂತರ ವಿಮಾನವು ಸಂಪರ್ಕ ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಜೋಮ್ಸಮ್‌ ಗೆ ಹೋಗಬೇಕಿದ್ದ ವಿಮಾನವು ಧವಳಗಿರಿ ಪರ್ವತಗಳ ಕಡೆ ತಿರುಗಿದೆ ಎಂದು ನೇಪಾಳಿ ಮಾಧ್ಯಮಗಳು ಹೇಳಿವೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ವಿಮಾನವು ಮುಸ್ತಾಂಗ್ ಜಿಲ್ಲೆಯ ಲೆಟೆಯ “ಟಿಟಿ” ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಶಂಕಿಸಲಾಗಿದೆ.  ವಿಮಾನ ಅಪಘಾತದಂತ ಕೆಲವು ಅಸಾಮಾನ್ಯ ಸದ್ದು ಕೇಳಿರುವ ಕುರಿತು ಸ್ಥಳಿಯರು ಮಾಹಿತಿ ನೀಡಿದ್ದು ಶೋಧ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ನೇಪಾಳಿ ಪೋಲೀಸರು ಹೇಳಿದ್ದಾರೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ನೇಪಾಳದ ಗೃಹ ಸಚಿವಾಲಯವು ನಾಪತ್ತೆಯಾದ ವಿಮಾನದ ಹುಡುಕಾಟಕ್ಕಾಗಿ ಮುಸ್ತಾಂಗ್ ಮತ್ತು ಪೋಖರಾದಿಂದ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ನೇಪಾಳ ಸೇನೆಯ ಹೆಲಿಕಾಪ್ಟರ್ ಕೂಡ ಹುಡುಕಾಟಕ್ಕೆ ನಿಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!