ಕಾವೇರಿ ನದಿ ಸಂರಕ್ಷಣೆಗೆ ಯೋಜನೆ ರೂಪಿಸಿ: ನದಿ‌ ಸ್ವಚ್ಛತಾ ಆಂದೋಲನ‌ ಸಮಿತಿಯಿಂದ ಒತ್ತಾಯ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಗಡಿ ಗುರುತು ಸರ್ವೆ ಮಾಡುವ ಮೂಲಕ ನದಿಯ ಸಂರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಸರ್ಕಾರದಿಂದ ಯೋಜನೆ ರೂಪಿಸಬೇಕೆಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಜಿಲ್ಲಾಧಿಕಾರಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ‌ ಡಾ.ಬಿ.ಸಿ.ಸತೀಶ್ ಅವರನ್ನು ಭೇಟಿ ಮಾಡಿದ ಸಮಿತಿ ಪ್ರಮುಖರು, ಈ ಸಾಲಿನ ರಾಜ್ಯ ಮತ್ತು ಕೇಂದ್ರದ ಬಜೆಟ್’ನಲ್ಲಿ ಜೀವನದಿ ಕಾವೇರಿ ಸಂರಕ್ಷಣೆ ಮತ್ತು ಅಭಿವೃದ್ದಿಗಾಗಿ ಅವಶ್ಯವಿರುವ ಅನುದಾನವನ್ನು ಮೀಸಲಿರಿಸುವಂತೆ ಕೋರಿದರು.
ಜೀವನದಿ ಕಾವೇರಿ ಮೂಲದಿಂದಲೇ ನಿರಂತರವಾಗಿ ಅಸ್ತಿತ್ವವನ್ನು ಕಳೆದುಕೊಳ್ಳುವುದರೊಂದಿಗೆ ಸಂಪೂರ್ಣ ಕಲುಷಿತಗೊಳ್ಳುತ್ತಿರುವುದಕ್ಕೆ ಸಂಬಂಧಿಸಿದ ಪ್ರಮುಖ ಕಾರಣಗಳು ಹಾಗೂ ವಾಸ್ತವ ಸ್ಥಿತಿಗತಿ ಬಗ್ಗೆ ಮಾಹಿತಿಗಳನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ಪ್ರಮುಖರು, ತಲಕಾವೇರಿಯಿಂದ ಜಿಲ್ಲೆಯ ಗಡಿಭಾಗ ಶಿರಂಗಾಲ ತನಕ 23 ಗ್ರಾಮ ಪಂಚಾಯಿತಿ ಮತ್ತು ಒಂದು ಪಟ್ಟಣ ಪಂಚಾಯತಿ ವ್ಯಾಪ್ತಿಯ ನದಿ ತಟದ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾವೇರಿ ಹರಿಯುವ ಮಡಿಕೇರಿ, ವೀರಾಜಪೇಟೆ ಹಾಗೂ ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ, ಸಮುದಾಯ ಶೌಚಾಲಯ ಮತ್ತು ಸಮರ್ಪಕ ನಿರ್ವಹಣೆ, ಕಸ ವಿಲೇವಾರಿಗೆ ವಾಹನ ಸೌಲಭ್ಯ ಮತ್ತು ನದಿ ತಟಗಳಲ್ಲಿ ತಡೆಗೋಡೆ ನಿರ್ಮಾಣ, ಗ್ರಾಮಗಳ ವ್ಯಾಪ್ತಿಯಲ್ಲಿ ನದಿ ತೀರದಲ್ಲಿರುವ ಅಕ್ರಮ ಶೆಡ್, ಕಟ್ಟಡಗಳ ಸ್ಥಳಾಂತರ ಮತ್ತು ಪುನರ್ವಸತಿ ಕಲ್ಪಿಸುವುದು, ಪ್ರವಾಸಿ ಕೇಂದ್ರಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳು ನೇರವಾಗಿ ನದಿ ಸೇರಿದಂತೆ ಯೋಜನೆ ರೂಪಿಸುವುದು, ಪ್ರವಾಸಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಪ್ಲಾಸ್ಟಿಕ್ ಬಾಟಲಿಗಳ ಹಾವಳಿಯನ್ನು ತಪ್ಪಿಸುವುದು, ನದಿ ತಟಗಳ ಒತ್ತುವರಿ ತೆರವುಗೊಳಿಸಿ ನದಿ ಗಡಿ ಗುರುತು ಮಾಡುವುದು ಮತ್ತು ಪ್ರದೇಶವನ್ನು ಅಭಿವೃದ್ಧಿಗೊಳಿಸುವುದು, ಪಟ್ಟಣ ಮತ್ತು ಗ್ರಾಮಗಳ ತ್ಯಾಜ್ಯಗಳು ನೇರವಾಗಿ ನದಿಗೆ ಸೇರಿದಂತೆ ಇಂಗುಗುಂಡಿ ನಿರ್ಮಾಣ ಮತ್ತು ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು, ಕುಶಾಲನಗರ ಒಳಚರಂಡಿ ಕಾಮಗಾರಿ ಕೂಡಲೇ ಪೂರ್ಣಗೊಳಿಸಿ ಲೋಕಾರ್ಪಣೆ ಗೊಳಿಸುವಂತೆ ಮನವಿಯಲ್ಲಿ ಕೋರಲಾಗಿದೆ.
ಕಾವೇರಿ ನದಿ ಸಂರಕ್ಷಣೆಗಾಗಿ ಸರ್ಕಾರದ ಮೂಲಕ ಈ ಬಾರಿಯ ಬಜೆಟ್’ನಲ್ಲಿ ಅನುದಾನ ಕಲ್ಪಿಸುವ ಮೂಲಕ ಹಂತಹಂತವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ದಕ್ಷಿಣ ಭಾರತದ ಜೀವನದಿ ಕಾವೇರಿ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಮನವಿ ಮಾಡಲಾಗಿದೆ.
ನದಿ ಸಂರಕ್ಷಣೆಯ ಸಂಬಂಧ ಜಿಲ್ಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ಸಂಬಂಧಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಮತ್ತು ನದಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಜಿಲ್ಲಾ ಸಂಚಾಲಕಿ ರೀನಾ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಮಂಡೆಪಂಡ ಬೋಸ್ ಮೊಣ್ಣಪ್ಪ, ನದಿ ಜಾಗೃತಿ ಸಮಿತಿಯ ಪ್ರಮುಖರಾದ ಡಿ.ಆರ್.ಸೋಮಶೇಖರ್, ಸಮಿತಿ ಗೌರವ ಸಲಹೆಗಾರ ಚೆಯ್ಯಂಡ ಸತ್ಯ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!