ಇದೀಗ ಹುಬ್ಬಳ್ಳಿ ನೆಲದಲ್ಲಿ ನಿಂತು ಕಾಣಬಹುದು ಅಂಬರ ಚುಂಬಿಸೋ ಕನಸು!

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಉತ್ತರ ಕರ್ನಾಟಕದ ಭಾಗ್ಯದ ಬಾಗಿಲು ತೆರೆದಿದೆ. ಇಲ್ಲಿನ ಹುಬ್ಬಳ್ಳಿ, ಕಲಬುರ್ಗಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳ ವ್ಯಾಪ್ತಿಯಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ (ಫ್ಲೈಯಿಂಗ್ ಟ್ರೈನಿಂಗ್ ಸೆಂಟರ್) ಆರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದಿಸಿದೆ.

ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಮತ್ತು ಕಲ್ಲಿದ್ದಲು ಇಲಾಖಾ ಸಚಿವ ಹಾಗೂ ಧಾರವಾಡ ಸಂಸದ ಪಹ್ಲಾದ ಜೋಶಿ ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಈ ಕೇಂದ್ರ ಸ್ಥಾಪನೆಯಿಂದ ರಾಜ್ಯದ ಎರಡನೇ ರಾಜಧಾನಿಯಾಗಿ ಹೊರಹೊಮ್ಮುತ್ತಿರುವ ಹುಬ್ಬಳ್ಳಿಗೆ ಮತ್ತೊಂದು ಹಿರಿಮೆ ದೊರೆಯಲಿದೆ ಎಂದಿದ್ದಾರೆ.

ದೇಶದಲ್ಲಿ ವಿಮಾನ ಚಾಲನೆ ಮಾಡುವ ಪೈಲಟ್‌ಗಳ ಕೊರತೆಯನ್ನು ನೀಗಿಸಲು ವಿಮಾನ ತರಬೇತಿ ಸಂಸ್ಥೆಗಳನ್ನು ದೇಶಾದ್ಯಂತ ಕೇಂದ್ರ ಸರಕಾರ ಸ್ಥಾಪಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಯಾವುದೇ ವೈಮಾನಿಕ ಶಾಲೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಖ್ಯಾತಿಯ ಹುಬ್ಬಳ್ಳಿಯಲ್ಲಿ ಈ ತರಬೇತಿ ಕೇಂದ್ರ ತಲೆ ಎತ್ತಲಿರುವುದು ಈ ಭಾಗದ ಜನತೆಗೆ ಸಂತಸದ ವಿಷಯ. ಇನ್ನೆರಡು ಕಲಬುರ್ಗಿ ಹಾಗೂ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾರಂಭ ಮಾಡಲಿವೆ.

ಯುವ ಜನತೆಗೆ ಉತ್ತಮ ಅವಕಾಶ
ಈ ಹಿಂದಿನ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಹಾಗೂ ಈಗಿನ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಉತ್ತರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ ಹಾಗೂ ಕಲಬುರ್ಗಿ ವಿಮಾನ ನಿಲ್ದಾಣಗಳಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸಲು ಒತ್ತಾಯ ಮಾಡಲಾಗಿತ್ತು. ನನ್ನ ಬೇಡಿಕೆಗೆ ಸ್ಪಂದಿಸಿರುವ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಈ ಕ್ರಮದಿಂದ ಇಡೀ ಉತ್ತರ ಕರ್ನಾಟಕದ ವಿಮಾನ ಚಾಲನಾ ತರಬೇತಿ ಬಯಸುವ ಯುವಕರಿಗೆ ಒಳ್ಳೆಯ ಅವಕಾಶ ಸಿಕ್ಕಂತಾಗಿದೆ. ಅಲ್ಲದೇ ಈ ಕೇಂದ್ರ ಸ್ಥಾಪನೆಯಿಂದ ಕೈಗಾರಿಕೋದ್ಯಮಕ್ಕೂ ಸಹಕಾರಿಯಾಗಲಿದೆ ಎಂದೂ ಸಚಿವ ಜೋಶಿ ತಿಳಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸಲು ಒಪ್ಪಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸಚಿವ ಜೋಶಿ ಕೃತಜ್ಞತೆ ತಿಳಿಸಿದ್ದಾರೆ.

ದೇಶದ ಆರರಲ್ಲಿ ಮೂರು ಕರ್ನಾಟಕಕ್ಕೆ!
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ವು ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಫಾಲಿ ಎಚ್. ಮೇಜರ್ ನೇತೃತ್ವದ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಹೊಸ ಫ್ಲೈಯಿಂಗ್ ತರಬೇತಿ ಕೇಂದ್ರಗಳನ್ನು ತೆರೆಯುವ ನಿರ್ಧಾರ ತೆಗೆದುಕೊಂಡಿದೆ. ಪ್ರಾಧಿಕಾರವು ದೇಶದ ಆರು ವಿಮಾನ ನಿಲ್ದಾಣಗಳಲ್ಲಿ ವಿಮಾನ ಚಾಲನಾ ತರಬೇತಿ ಆರಂಭಿಸಲು ಸಂಸ್ಥೆಗಳಿಗೆ ಜಮೀನು ನೀಡಲು ಟೆಂಡರ್ ಕರೆದಿದೆ. ಅದರಲ್ಲಿ ಕರ್ನಾಟಕದ ಬೆಳಗಾವಿ, ಕಲಬುರ್ಗಿ ಸೇರಿದೆ. ದೇಶದಲ್ಲಿ ಕೇಂದ್ರ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಎಂಟು ವಿಮಾನ ಹಾರಾಟ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಅವುಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವು ಒಂದಾಗಿದೆ.

ಭಾರತಕ್ಕೆ ಎಷ್ಟು ಪೈಲಟ್ ಬೇಕಿದ್ದಾರೆ?
ನಾಗರಿಕ ವಿಮಾನಯಾನ ಸಚಿವಾಲಯದ ಅಂದಾಜಿನ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಭಾರತವು ತನ್ನ ಬೆಳೆಯುತ್ತಿರುವ ನಾಗರಿಕ ವಿಮಾನಯಾನ ಕ್ಷೇತ್ರದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅಂದಾಜು 9,488 ಪೈಲಟ್‌ಗಳ ಅಗತ್ಯವಿದೆ. ಪ್ರಸ್ತುತ, ಭಾರತದ ನಿಗದಿತ ವಿಮಾನಯಾನ ಸಂಸ್ಥೆಗಳು 9000 ಪೈಲಟ್‌ಗಳನ್ನು ನೇಮಿಸಿಕೊಂಡಿವೆ. ನಾಗರಿಕ ವಿಮಾನಯಾನ ನಿಯಂತ್ರಕ (ಡಿಜಿಸಿಎ) ಪ್ರತಿ ವರ್ಷ ಸುಮಾರು 700-800 ವಾಣಿಜ್ಯ ಪೈಲಟ್ ಪರವಾನಗಿಗಳನ್ನು ನೀಡುತ್ತದೆ. ಅದರಲ್ಲಿ ಶೇ. 30 ವಿದೇಶದಲ್ಲಿ ತರಬೇತಿ ಪಡೆದ ಪೈಲಟ್‌ಗಳಿಗೆ ನೀಡಲಾಗುತ್ತದೆ.

ವಿಮಾನ ನಿಲ್ದಾಣ ಪಾಧಿಕಾರವು ತರಬೇತಿ ಸಂಘಟನೆಗಳಿಗೆ (ಎಫ್.ಟಿ.ಒ.) ಸಂಬಂಧಿಸಿದ ನೀತಿಗಳನ್ನು ಉದಾರಗೊಳಿಸಿದೆ. ಎಫ್.ಟಿ.ಒ.ಗಳಿಂದ ವಿಮಾನ ನಿಲ್ದಾಣಕ್ಕೆ ನೀಡಬೇಕಿದ್ದ ರಾಜಧನವನ್ನು ರದ್ದುಪಡಿಸಲಾಗಿದೆ. ಬಾಡಿಗೆಯನ್ನು ಹಲವು ಕೋಟಿ ರೂಪಾಯಿಗಳಿಂದ 15 ಲಕ್ಷಕ್ಕೆ ಇಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!