ಥಿಯೇಟರ್ ಗಳಲ್ಲಿ ರಾಷ್ಟ್ರಗೀತೆ ಜೊತೆಗೆ‌ ನಾಡಗೀತೆಯನ್ನು ಹಾಕಿ: ಜಮೀರ್ ಪುತ್ರ ಝೈದ್ ಖಾನ್ ಸಿಎಂಗೆ ಮನವಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಥಿಯೇಟರ್ ಗಳಲ್ಲಿ ರಾಷ್ಟ್ರಗೀತೆ ಜೊತೆಗೆ‌ ನಾಡಗೀತೆಯನ್ನೂ ಹಾಕುವಂತೆ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಹಾಗೂ ನಟ ಝೈದ್ ಖಾನ್ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಮಾಡಿದರು.

ಕನ್ನಡಪರ ಸಂಘಟನೆಗಳ ಮುಖಂಡರ ಜತೆ ತೆರಳಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ನಮ್ಮ ದೇಶ, ನಾಡು, ನುಡಿಯ ಸಂಕೇತ ಆಗಿರುವ ರಾಷ್ಟ್ರ ಗೀತೆ ಹಾಗೂ ನಾಡಗೀತೆಗಳು ಹಿರಿಯರಿಂದ ಕಿರಿಯರವರೆಗೂ ಎಲ್ಲರ ಬಾಯಲ್ಲೂ ಮೊಳಗಬೇಕು. ನಾಡಗೀತೆಯ ಮಹತ್ವ ಇಂದಿನ ಮತ್ತು ಮುಂದಿನ ಪೀಳಿಗೆಯ ಹೃದಯದೊಳಗೆ ಇಳಿಯಬೇಕು.

ಹಾಗಾಗಿ ಮುಖ್ಯಮಂತ್ರಿಗಳು ರಾಜ್ಯದ ಚಿತ್ರಮಂದಿರಗಳಲ್ಲಿ ಇನ್ನುಮುಂದೆ ರಾಷ್ಟ್ರಗೀತೆಯ ಜೊತೆಗೆ ನಾಡಗೀತೆಯೂ ಮೊಳಗುವಂತೆ ಮಾಡಬೇಕು ಎಂಬುದಾಗಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಚಲನಚಿತ್ರ ಮಂಡಳಿಯವರೊಂದಿಗೆ ಚರ್ಚಿಸಿ ಈ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ನಾನಾಯ್ತು, ಸಿನಿಮಾ ಇಂಡಸ್ಟ್ರಿ ಆಯ್ತು
ಇದೇ ವೇಳೆ, ತಮ್ಮ ಬನಾರಸ್ ಅನ್ನು ಬಾಯ್ಕಾಟ್ ಮಾಡುವ ಕೂಗು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಒಬ್ಬ ಕಲಾವಿದ. ನಾನು ಪ್ರಾಮಾಣಿಕವಾಗಿ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ.ನಾನಾಯ್ತು, ಸಿನಿಮಾ ಇಂಡಸ್ಟ್ರಿ ಆಯ್ತು ಎಂದು ಇದ್ದೇನೆ. ನಮ್ಮ ತಂದೆ ಜಮೀರ್ ಅಹಮದ್ ಅನ್ನೋ ಕಾರಣಕ್ಕಾಗಿ ವಿರೋಧಿಸ್ತಿದರೆ ಅದಕ್ಕೂ ನನಗೂ ಸಂಬಂಧ ಇಲ್ಲ. ಇದರಲ್ಲಿ ನನ್ನದೇನು ತಪ್ಪಿದೆ? ಸೋಲು ಮತ್ತು ಗೆಲುವು ಎರಡನ್ನೂ ಸಮಾನವಾಗಿ ತೆಗೆದುಕೊಳ್ಳುವ ಸ್ವಭಾವ ನನ್ನದು. ನಾನೂ ಈ ನೆಲದ ಕಲಾವಿದ. ಜನ ನನ್ನ ಚಿತ್ರ ನೋಡಿ ಆಶೀರ್ವದಿಸುತ್ತಾರೆ ಎಂದು ನಂಬಿದ್ದೇನೆ ಎಂದು ತಿಳಿಸಿದರು.

ನವೆಂಬರ್ 4 ರಂದು ಬನಾರಸ್ ಸಿನಿಮಾ ಬಿಡುಗಡೆಯಾಗುತ್ತಿದೆ. ನನ್ನ ಮೊದಲ ಸಿನಿಮಾ ಬನಾರಸ್. ಬನಾರಸ್ ಸಿನಿಮಾ ವೀಕ್ಷಣೆಗೆ ಸಿಎಂ ಅವರಿಗೆ ಆಹ್ವಾನ ನೀಡಿದ್ದೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!