Sunday, August 14, 2022

Latest Posts

ಪ್ರಧಾನಿ ಮೋದಿ ಜನಪರ ಕಾರ್ಯಕ್ರಮಗಳಿಂದಾಗಿ ಬಿಜೆಪಿ ಕಡೆಗೆ ಮುಖ ಮಾಡಿರುವ ಸಮುದಾಯ: ಛಲವಾದಿ ನಾರಾಯಣಸ್ವಾಮಿ

ಹೊಸದಿಗಂತ ವರದಿ, ಕೋಲಾರ:

ಮೋದಿಯವರ ಜನಪರ ಕಾರ್ಯಕ್ರಮಗಳಿಂದಾಗಿ ಇಡೀ ದೇಶದ ಪರಿಶಿಷ್ಟ ಜಾತಿ ಸಮುದಾಯ ಬಿಜೆಪಿ ಕಡೆ ಮುಖ ಮಾಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅಲೆ ಮೊದಲ ಕಾರಣವಾದರೆ, ಪಕ್ಷದ ಮುಖಂಡರು ಜನರ ಜತೆ ಸೇರಿ ಸಂಘಟನೆ ಮಾಡುತ್ತಿರುವುದು ಹಾಗೂ ಇತರರ ಪಕ್ಷಗಳು ಮಲಗಿರುವುದು ಇದಕ್ಕೆ ಕಾರಣ ಎಂದು ಹೇಳಿದರು.
ತಾನು ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷನಾದ ನಂತರ ಈಗಾಗಲೇ ರಾಜ್ಯದಾದ್ಯಂತ ಮೊದಲ ಹಂತದ ಪ್ರವಾಸ ಮುಗಿಸಿ ಎರಡನೇ ಹಂತದಲ್ಲೂ ೧೬ ಜಿಲ್ಲೆಗಳನ್ನು ಮುಗಿಸಿದ್ದಾಗಿದೆ. ಬಿಜೆಪಿಯಲ್ಲಿರುವ ೭ ಮೋರ್ಚಾ ಪೈಕಿ ಎಸ್‌ಸಿ ಮೋರ್ಚಾ ಕಡೇ ಸ್ಥಾನದಲ್ಲಿತ್ತು. ಇಂದು ಪ್ರಥಮ ಸ್ಥಾನದಲ್ಲಿದ್ದು, ಮಾತೃ ಸಮಿತಿಯಷ್ಟೇ ಕೆಲಸವನ್ನೂ ಎಸ್‌ಸಿ ಮೋರ್ಚಾ ಮಾಡುತ್ತಿದೆ ಎಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶಾಸಕರನ್ನು ಗೆಲ್ಲಲಾಗಲಿಲ್ಲ, ಲೋಕಸಭೆ ಚುನಾವಣೆಯಲ್ಲಿ ಸಂಸದರನ್ನು ಗೆಲ್ಲಿಸಿ ಮೋದಿ ಶ್ರಮಕ್ಕೆ ಸಹಕಾರ ನೀಡಿದ್ದೀರಿ,ಮುಂದಿನ ಎರಡು ವರ್ಷದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ೪ ಕ್ಷೇತ್ರಗಳನ್ನು ಗೆಲ್ಲಲೇ ಬೇಕು. ಪ.ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಪಕ್ಷದ ಕಾರ್ಯಕರ್ತರು ಸಂಘಟನೆ ಬಲಿಷ್ಠಗೊಳಿಸಬೇಕು ಎಂದರು.
ಮಾತೆತ್ತಿದರೆ ಬಿಜೆಪಿ ದಲಿತ ವಿರೋಧಿ, ಸಂವಿಧಾನವನ್ನು ತೆಗೆಯುತ್ತಾರೆಂದು ಪ್ರತಿಪಕ್ಷಗಳು ಅಪಪ್ರಚಾರ ಮಾಡಿದವು. ಬಿಜೆಪಿ ಮಾತಿನಲ್ಲಿ ಉತ್ತರ ನೀಡಲಿಲ್ಲ, ಸಂವಿಧಾನದ ಅಡಿಯಲ್ಲಿ ಚಾಯ್ ಮಾರುವವನೂ ಪ್ರಧಾನಿ ಆಗಬಹುದು ಎಂಬುದನ್ನು ನಡವಳಿಕೆಯಲ್ಲಿ ಉತ್ತರ ನೀಡಿತು.
ಅಂಬೇಡ್ಕರ್ ೩೭೦ನೇ ಕಾಯ್ದೆಯನ್ನು ವಿರೋಧಿಸಿದ್ದರು. ಅದು ನೆಹರು ಮತ್ತು ಫಾರೂಕ್ ಅಬ್ದುಲ್ಲಾ ಗೆಳೆತನದಿಂದ ಮಾಡಿಕೊಂಡ ಕಾಯ್ದೆಯಾಗಿತ್ತು. ಇದನ್ನು ರದ್ದುಗೊಳಿಸುವ ಮೂಲಕ ಜಮ್ಮುಕಾಶ್ಮೀರದಲ್ಲಿನ ಪರಿಶಿಷ್ಟರಿಗೆ ೭೨ ವರ್ಷದ ಬಳಿಕ ಮೀಸಲಾತಿ ಸಿಕ್ಕಿದೆ, ಈ ಮೂಲಕ ಬಿಜೆಪಿ ಮೀಸಲಾತಿ, ಸಂವಿಧಾನದ ಪರವಾಗಿದ್ದೇವೆ ಎಂಬುದನ್ನು ತೋರಿಸಿದೆ, ಮೀಸಲಾತಿಯನ್ನು ರದ್ದುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಸುಳ್ಳು ಹೇಳುವವರಿಗೆ ಉತ್ತರ ನೀಡಿದೆ ಎಂದರು.
ಡಾ,ಬಿ.ಆರ್. ಅಂಬೇಡ್ಕರ್ ಅವರನ್ನು ತಿರಸ್ಕರಿಸಿದ, ಹೆಜ್ಜೆಹೆಜ್ಜೆಗೂ ಅಪಮಾನ ಮಾಡಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಸರ್ಕಾರ ಲಂಡನ್‌ನಲ್ಲಿರುವ ಅವರ ಜಾಗ ಸೇರಿದಂತೆ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಕ್ಷೇತ್ರಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಪ್ರವಾಸಿಗರು ವೀಕ್ಷಿಸುವಂತೆ ಮಾಡಿ ಗೌರವ ನೀಡಿದೆ. ಅಂಬೇಡ್ಕರ್ ಬರೆದ ಸಂವಿಧಾನವನ್ನು ಕಾಂಗ್ರೆಸ್ ೮೮ ಬಾರಿ ತಿದ್ದುಪಡಿ ಮಾಡಿ ಅದರ ಮಹತ್ವವನ್ನು ಕಳೆದಿದೆ. ಬಿಜೆಪಿ ಆರೇಳು ತಿದ್ದು ಪಡಿಗಳಷ್ಟೇ ಮಾಡಿದೆ ಎಂದು ನುಡಿದರು.
ಸಂವಿಧಾನ ಎಸ್ಸಿಎಸ್ಟಿಗಳಿಗೆ ಗ್ರಂಥ ಇದ್ದಂತೆ. ಅದರ ರಕ್ಷಣೆಗೆ ಹೋರಾಟ ಮಾಡಬೇಕು. ಬೇರೆಯವರು ತಮ್ಮ ರಕ್ಷಣೆಗಾಗಿ ಹೋರಾಟ ಮಾಡುತ್ತಾರೆ. ಪರಿಶಿಷ್ಟ ಜಾತಿಗೆ ಸಂವಿಧಾನದತ್ತವಾಗಿ ಮೀಸಲಾತಿ ಬಂದಿದ್ದರೆ ಉಳಿದವರಿಗೆ ಬಂದ ಮೀಸಲಾತಿ ಶಾಸನಾತ್ಮಕವಾಗಿ. ಶಾಸನವನ್ನು ತಿದ್ದಿ ಅನುಕೂಲ ಪಡೆದುಕೊಂಡಿದ್ದು ಎಂದರು.
ಇಂದು ಯಾವ ಜಾತಿಯೂ ಕೂಡ ಮೀಸಲಾತಿಯಿಂದ ಹೊರಗಡೆ ಇಲ್ಲ.ಈಗ ಶುರು ಆಗಿರುವ ವೀಸಲಾತಿ ಹೋರಾಟ ಮೇಲಿದ್ದವರನ್ನು ಕೆಳಗಿನಹಡಿಗೆ ತನ್ನಿ ಎಂಬುದಾಗಿದೆ. ೨ಎ ಮೀಸಲಾತಿಗೆ ಹೋರಾಟ ನಡೆಸುತ್ತಿರುವವರು ಆರ್ಥಿಕವಾಗಿ ಹಿಂದುಳಿದಿದ್ದೇವೆಂದು ಶೇ.೧೦ ರಲ್ಲಿ ಮೀಸಲು ಕೇಳಬಹುದು. ಅದು ಬಿಟ್ಟು ಮೀಸಲಾತಿ ನೀಡದಿದ್ದಲ್ಲಿ ಅಧಿಕಾರದಿಂದ ಕೆಳಗಿಳಿಸುತ್ತೇವೆಂದು ಸರ್ಕಾರವನ್ನು ಮಣಿಸುವ ನಡವಳಿಕೆ ಸರಿಯಲ್ಲ, ಇಂತಹದ್ದನ್ನು ಯಾವ ಕಾರಣಕ್ಕೆ ಸಹಿಸಿಕೊಂಡಿದ್ದಾರೋ ಗೊತ್ತಿಲ್ಲ ಎಂದು ನುಡಿದರು
ಸಂವಿಧಾನದಲ್ಲಿ ಮೀಸಲಾತಿಯ ಹಕ್ಕು ಎಸ್ಸಿಎಸ್ಟಿಗೆ ಮಾತ್ರ ನೀಡಿದ್ದು. ಯಾವುದೇ ಕಾರಣಕ್ಕೂ ತಿರಸ್ಕರಿಸುವಂತಿಲ್ಲ. ಉಳಿದವರದ್ದು ಬೇಡಿಕೆಯಷ್ಟೇ, ಒಪ್ಪಬಹುದು, ಬಿಡಬಹುದು ಎಂದು ಪ್ರತಿಪಾದಿಸಿದರು.
ಪರಿಶಿಷ್ಟ ಜಾತಿಯಲ್ಲೂ ಗೊಂದಲ ಶುರುವಾಗಿದೆ.ಎಸ್.ಎಂ.ಕೃಷ್ಣ ಅವಧಿಯಲ್ಲಿ ರಚನೆಯಾದ ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ ೭ ವರ್ಷಗಳಾಗಿದೆ. ತಮ್ಮ ಅವಧಿಯಲ್ಲಿ ತೀರ್ಮಾನ ಮಾಡದ ಸಿದ್ದರಾಮಯ್ಯ ಈಗ ವರದಿ ಒಪ್ಪಲೇಕೆಂದು ಹೇಳುತ್ತಿದ್ದಾರೆ. ತಾವು ಸಿಎಂ ಆಗಿದ್ದಾಗ ಕಡಲೆಪುರಿ ತಿನ್ನುತ್ತಿದ್ದರಾ ಎಂದು ಛೇಡಿಸಿದ ಅವರು, ತಾರ್ಕಿಕ ಅಂತ್ಯ ಬಿಜೆಪಿ ಸರ್ಕಾರದಲ್ಲೇ ಕಾಣಲಿದೆ ಎಂದು ಹೇಳಿದ್ದೇವೆ ಎಂದರು.
೧೮ ವರ್ಷಗಳಿಂದ ಸದಾಶಿವ ಆಯೋಗದ ವರದಿಯೇ ಅನುಷ್ಟಾನಗೊಂಡಿಲ್ಲ. ಇನ್ನು ಬಳ್ಳಾರಿಯಿಂದ ವಾಕಿಂಗ್ ಬಂದಿದ್ದೇವೆಂಬ ಕಾರಣಕ್ಕೆ ಮೀಸಲಾತಿ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಸರ್ಕಾರವನ್ನು ಬ್ಲಾಕ್ ಮೇಲ್ ಮಾಡುವುದಲ್ಲ, ನ್ಯಾಯಬದ್ಧ ಬೇಡಿಕೆ ಇದ್ದರೆ ಸರ್ಕಾರ ಒಪ್ಪುತ್ತದೆ ಎಂದು ನುಡಿದರು.
ಜಿಲ್ಲಾಧ್ಯಕ್ಷ ಅಮರೇಶ್, ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿ, ಜಿಲ್ಲೆಯಲ್ಲಿ ಎಸ್ಸಿ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಛಲವಾದಿ ನಾರಾಯಣಸ್ವಾಮಿ ಮೋರ್ಚಾದ ಅಧ್ಯಕ್ಷರಾದ ನಂತರ ತಂಡ ಕಟ್ಟಿಕೊಂಡು ರಾಜ್ಯದಾದ್ಯಂತ ಪ್ರವಾಸ ಮಾಡಿ ಸಮುದಾಯದ ಜನರನ್ನು ಪಕ್ಷಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಗಲ್ಲಿ ಬದ್ಧತೆಯಿಂದ ಕೆಲಸ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕೆಂದರು.
ರಾಜ್ಯ ಕಾರ್ಯದರ್ಶಿ ಹನುಮಂತಪ್ಪ,ಜಿಪಂ ಸದಸ್ಯೆ,ಕೆಜಿಎಫ್ ಕುಡಾ ಅಧ್ಯಕ್ಷೆ ಅಶ್ವಿನಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಂಬರೀಶ್,ಕೆಜಿಎಫ್ ಸುರೇಶ್ ಬಾಬಿ, ರಾಜ್ಯ ಉಪಾಧ್ಯಕ್ಷೆ, ಜಿಲ್ಲಾ ಉಸ್ತುವಾರಿ ಶ್ರೀದೇವಿ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss