ಹೊಸದಿಗಂತ ವರದಿ ಶಿವಮೊಗ್ಗ :
ನೂತನ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ವಿಮಾನದಲ್ಲಿ ಪ್ರಥಮವಾಗಿ ಬಂದು ಇಳಿಯುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಖಚಿತ ಪಡಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 27 ರಂದು ವಿಮಾನ ನಿಲ್ದಾಣದ ಉದ್ಘಾಟನೆ ನಡೆಯಲಿದೆ. ಜೊತೆಗೆ ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗದ ಶಂಕುಸ್ಥಾಪನೆ ಕೂಡ ನೆರವೇರಲಿದೆ. ಅಂದು ಒಟ್ಟು 1789 ಕೋಟಿ ರೂ.ಗಳ ಕಾಮಗಾರಿ ಉದ್ಘಾಟನೆಗೊಳ್ಳಲಿದೆ. ಜೊತೆಗೆ 3377 ಕೋಟಿ ರೂ. ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಲಿದೆ ಎಂದರು.
ವಿಮಾನ ನಿಲ್ದಾಣದ ಉದ್ಘಾಟನೆಗೆ ಸಾರ್ವಜನಿಕರು ಕೂಡ ಪಾಲ್ಗೊಳ್ಳಲು ಅವಕಾಶ ಇದೆ. ಸೋಗಾನೆ ವಿಮಾನ ನಿಲ್ದಾಣದ ಪ್ರದೇಶದಲ್ಲಿಯೇ ಸಮಾರಂಭ ನಡೆಯಲಿದೆ. ಸುಮಾರು 2 ಲಕ್ಷ ಜನರು ಅಂದು ಸೇರುವ ನಿರೀಕ್ಷೆ ಇದೆ. ಅಲ್ಲಿಯೇ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯಲಿದೆ ಎಂದು ತಿಳಿಸಿದರು.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಎರಡು ಹಂತದಲ್ಲಿ ಇದಕ್ಕಾಗಿ ಭೂ ಸ್ವಾಧೀನ ನಡೆದಿದೆ. ಶಿವಮೊಗ್ಗದಿಂದ ಶಿಕಾರಿಪುರವರೆಗೆ ಭೂ ಸ್ವಾಧೀನ ಮುಗಿದಿದೆ. 68 ಕೋಟಿ ರೂ.ಗಳನ್ನು ರೈತರಿಗೆ ಪರಿಹಾರವಾಗಿ ನೀಡಲಾಗಿದೆ. 612 ಕೋಟಿ ವೆಚ್ಚದಲ್ಲಿ ಮೊದಲ ಹಂತದ ರೈಲ್ವೆ ಮಾರ್ಗ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.