ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾರತಕ್ಕೆ ಗೌರವ ಸದಸ್ಯ ಸ್ಥಾನಮಾನ: ಭಾರತದಲ್ಲಿ ಸಿನಿಮಾ ಮಾಡುವಂತೆ ಮೋದಿ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಸ್ತುತ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾರತದ ಕೆಲವು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಉತ್ಸವದಲ್ಲಿ ನಮ್ಮ ದೇಶದ ಹಲವು ನಟರು ಕೂಡ ಭಾಗವಹಿಸಲಿದ್ದಾರೆ. ಇದರ ಜೊತೆಗೆ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾರತಕ್ಕೆ ‘ಗೌರವ ಸದಸ್ಯ ರಾಷ್ಟ್ರ’ ಎಂಬ ಸ್ಥಾನಮಾನವನ್ನು ನೀಡಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಕೂಡ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು.ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾರತದ ಸ್ಥಾನಮಾನದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿ ಪತ್ರದ ಮೂಲಕ ತಮ್ಮ ಸಂದೇಶವನ್ನು ರವಾನಿಸಿದ್ದಾರೆ.

ಈ ಪತ್ರದಲ್ಲಿ ಅವರು ಭಾರತೀಯ ಚಿತ್ರರಂಗದ ಹಿರಿಮೆ ಮತ್ತು ಇಲ್ಲಿ ಸಿನಿಮಾ ಚಿತ್ರೀಕರಿಸಲು ಎಷ್ಟು ಅನುಕೂಲಕರವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದು, ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯೇ ಅದರ ಶಕ್ತಿಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪ್ರತಿಭಾನ್ವಿತ ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ವಿಶ್ವದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು ಭಾರತಕ್ಕೆ ಬಂದು ಚಲನಚಿತ್ರಗಳನ್ನು ನಿರ್ಮಿಸಲು ಈ ಮೂಲಕ ಆಹ್ವಾನಿಸಿದ್ದಾರೆ.

ಸತ್ಯಜಿತ್ ರೇ ಅವರ ಶತದಿನೋತ್ಸವದ ಸಂದರ್ಭದಲ್ಲಿ ಕೇನ್ಸ್ ಕ್ಲಾಸಿಕ್ ನಲ್ಲಿ ಸತ್ಯಜಿತ್ ರೇ ಚಿತ್ರಗಳ ಪ್ರದರ್ಶನದ ಬಗ್ಗೆ ಮೋದಿ ಸಂತಸ ವ್ಯಕ್ತಪಡಿಸಿದರು. ಭಾರತದಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ ಅವಕಾಶವನ್ನು ವಿಶ್ವದಾದ್ಯಂತದ ನಿರ್ದೇಶಕರು ಮತ್ತು ನಿರ್ಮಾಪಕರು ಬಳಸಿಕೊಳ್ಳುವಂತೆ ಪತ್ರದಲ್ಲಿ ಮೋದಿ ಒತ್ತಾಯಿಸಿದ್ದಾರೆ. ಈ ಪತ್ರವನ್ನು ಟ್ವಿಟ್ಟರ್‌ನಲ್ಲಿ ಹಲವರು ಶೇರ್ ಮಾಡಿದ್ದು, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಕೇನ್ಸ್‌ ಚಲನಚಿತ್ರೋತ್ಸವದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!