ನಾಳೆ ಮತ್ತೊಮ್ಮೆ ಮೋದಿ ಪರ್ವ: ಹಲವು ಯೋಜನೆಗಳ ಉದ್ಘಾಟನೆ, ಹೇಗಿದೆ ಭದ್ರತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಳೆ ಮತ್ತೊಮ್ಮೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಸುಮಾರು 16,000 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಭಾನುವಾರ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮಂಡ್ಯದ ಮದ್ದೂರು ತಾಲೂಕಿನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇಗೆ ಚಾಲನೆ ನೀಡಲಿದ್ದಾರೆ. ಅಲ್ಲಿಯೇ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಲಿದೆ. ಈ ಹೆದ್ದಾರಿ 118 ಕಿಲೋಮೀಟರ್ ಉದ್ದವಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭಾರತ್ ಮಾಲಾ ಯೋಜನೆಯಡಿ ಸುಮಾರು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ನಂತರ ಮಧ್ಯಾಹ್ನ 3:15ಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ವಿಶ್ವದರ್ಜೆಯ ಪ್ಲಾಟ್‌ಫಾರ್ಮ್‌ ಆಗಿ ಹೊರ ಹೊಮ್ಮಿರುವ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ರೈಲ್ವೆ ಪ್ಲಾಟ್‌ಫಾರ್ಮ್‌ನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ. ಇದಕ್ಕೂ ಮುನ್ನ 1ನೇ ಪ್ಲಾಟ್‌ಫಾರ್ಮ್‌ 550 ಮೀಟರ್‌ ಉದ್ದ ಹೊಂದಿತ್ತು. ಇದೀಗ ಈ ಪ್ಲಾಟ್‌ಫಾರ್ಮ್‌ನ್ನು ವಿಸ್ತರಿಸಿ 10 ಮೀಟರ್‌ ಅಗಲದೊಂದಿಗೆ 1,505 ಮೀಟರ್​ಗೆ ವಿಸ್ತರಣೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಈ ಹೊಸ ರೈಲು ಪ್ಲಾಟ್‌ಫಾರ್ಮ್‌ ಲೋಕಾರ್ಪಣೆ ಮಾಡಿದ ನಂತರ 1,366 ಮೀಟರ್ ಉದ್ದದ ಗೋರಖ್‌ಪುರ ರೈಲು ನಿಲ್ದಾಣವನ್ನು ಹಿಂದಿಕ್ಕಲಿದೆ. ಐಐಟಿ ಕ್ಯಾಂಪಸ್​ನಿಂದಲೇ ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿಪಡಿಸಿದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಲೋಕಾರ್ಪಣೆಯನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಸಾಂಕೇತಿಕವಾಗಿ ಉದ್ಘಾಟನೆ ಮಾಡಲಿದ್ದಾರೆ.

ಬಳಿಕ ಧಾರವಾಡದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯನ್ನು ಉದ್ಘಾಟಿಸಲಿದ್ದಾರೆ. ಈ ಐಐಟಿ ನಿರ್ಮಾಣಕ್ಕೆ ತಗುಲಿರುವ ಬರೋಬ್ಬರಿ ವೆಚ್ಚ 850 ಕೋಟಿ ರೂಪಾಯಿ. ಹಾಗೆಯೇ ಹುಬ್ಬಳ್ಳಿಯಲ್ಲಿನ ಜಯದೇವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಂಕುಸ್ಥಾಪನೆ ಕೂಡ ನೆರವೇರಿಸಲಿದ್ದಾರೆ. 250 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಅಭಿವೃದ್ಧಿ ಪಡಿಸಲಿದ್ದು, ತೃತೀಯ ಹಂತದ ಹೃದ್ರೋಗ ಚಿಕಿತ್ಸೆ ನೀಡಲಾಗುವುದು.

ಡ್ರೋನ್‌ ಹಾರಾಟ ನಿಷೇಧ

ಮೋದಿ ಆಗಮನ ಹಿನ್ನೆಲೆ ಮಂಡ್ಯದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತಿದ್ದು, ಅವರು ಸಂಚರಿಸುವ ಮಾರ್ಗದಲ್ಲಿ ಡ್ರೋನ್ ಹಾರಾಟ ನಿಷೇಧ ಮಾಡಲಾಗಿದೆ. ಪ್ರಧಾನಿ ಮೋದಿ ಮೆಗಾ ರೋಡ್ ಶೋ ಹಿನ್ನೆಲೆ 15 ಕಿ.ಮೀವರೆಗೂ ಹೆಲಿಕ್ಯಾಮ್, ಡ್ರೋನ್ ಹಾರಿಸದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ಭದ್ರತಾ ಹಿತದೃಷ್ಟಿಯಿಂದ ಮಾನವ ರಹಿತ ಎಲೆಕ್ಟ್ರಿಕಲ್ ವಸ್ತು ಹಾಗೂ ಹೆಲಿಕಾಪ್ಟರ್ ಹಾರಾಟಕ್ಕೂ ನಿಷೇಧ ಹೇರಲಾಗಿದೆ. ಜೊತೆಗೆ ಪೊಲೀಸ್‌ ಬಿಗಿ ಭದ್ರತೆ ಇರಲಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!