ವಿಶ್ವದಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವ ಚುನಾವಣೆ ಇದಾಗಿದೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಗಡಿ ಜಿಲ್ಲೆ ಬೀದರ್​ಗೆ ಶನಿವಾರ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ಬೀದರ್​ನ ಹುಮನಾಬಾದ್​ನಲ್ಲಿ ಆಯೋಜಿಸಿರುವ ಬಿಜೆಪಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿರುವ ಮೋದಿಯವರು, ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು, ಈ ವೇಳೆ ಬಸವೇಶ್ವರರನ್ನು ನೆನಪಿಸಿದರು.

ಈ ವಿಧಾನಸಭೆ ಚುನಾವಣೆಗೆ ನನ್ನ ಈ ಯಾತ್ರೆ ಬೀದರ್​​ನಿಂದ ಆರಂಭವಾಗುತ್ತಿರುವುದು ನನ್ನ ಸೌಭಾಗ್ಯ. ಬಸವೇಶ್ವರರ ಅನುಗ್ರಹ ನಮಗೆ ಶಕ್ತಿ ತುಂಬಲಿದೆ. ಕರ್ನಾಟಕದ ಕಿರೀಟ ಬೀದರ್​​ನ ಆಶೀರ್ವಾದ ನನಗೆ ಸಿಕ್ಕಿದೆ ಎಂದರು.

ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ

ಈ ಚುನಾವಣೆ ಬರೀ ಐದು ವರ್ಷದ ಚುನಾವಣೆಯಲ್ಲ, ವಿಶ್ವದಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವ ಚುನಾವಣೆ, ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರವು ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡಲಿದೆ. ರಾಜ್ಯದ ಮೂಲೆ ಮೂಲೆಯನ್ನು ಅಭಿವೃದ್ಧಿ ಮಾಡುತ್ತೇವೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ದುಪ್ಪಟ್ಟಾಗಲಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಬೇಕೆಂದು ಮನವಿ ಮಾಡಿದರು.

ಡಬಲ್‌ ಎಂಜಿನ್‌ ಸರ್ಕಾರಕ್ಕೆ ಬೆಂಬಲಿಸಿ

ಇಂದು ಬೀದರ್ ಜಿಲ್ಲೆಗೆ ಬಂದಿರುವುದು ನನ್ನ ಸೌಭಾಗ್ಯ, ಕರ್ನಾಟಕದ ಕಿರೀಟ ಬೀದರ್ ಜನರ ಆಶೀರ್ವಾದ ಈ ಹಿಂದೆಯೂ ಬಿಜೆಪಿ ಮೇಲಿತ್ತು. ನೀರಾವರಿ ಯೋಜನೆ ಸೇರಿದಂತೆ ಹಲವು ಅಭಿವೃದ್ದಿ ಕೆಲಸಗಳನ್ನು ಬೀದರ್ ಜಿಲ್ಲಾ ವ್ಯಾಪ್ತಿಯಲ್ಲಿ ಮಾಡಲಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಅಭಿವೃದ್ಧಿ ಮಾಡುತ್ತೇವೆ, ಡಬಲ್ ಇಂಜಿನ್ ಸರ್ಕಾರಕ್ಕೆ ಬೆಂಬಲ ನೀಡಿ ಎಂದು ಹೇಳಿದರು.

ರೈತರಿಗೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಸರ್ಕಾರ

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಬಂಡವಾಳ ಹರಿದುಬರುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ದ್ರೋಹ ಮಾಡಿದೆ. ಬಿಜೆಪಿ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ರೈತರ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಶ್ರಮಿಸುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಲಾಭವಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಯೋಜನೆ ಶುರು ಮಾಡಿದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಇಲ್ಲಿತ್ತು. ಆಗ ಜನರಿಗೆ ಕೇಂದ್ರದ ಯೋಜನೆ ಸರಿಯಾಗಿ ತಲುಪುತ್ತಿರಲಿಲ್ಲ. ಫಲಾನುಭವಿಗಳ ಪಟ್ಟಿಯನ್ನೂ ಇಲ್ಲಿನ ಮೈತ್ರಿ ಸರ್ಕಾರ ನೀಡಿರಲಿಲ್ಲ. ರಾಜ್ಯ ಸರ್ಕಾರ ಒಂದು ಪೈಸೆ ಕೊಡುವುದು ಬೇಕಿರಲಿಲ್ಲ. ಆದರೂ ಅವರು ಪಟ್ಟಿ ಕೊಡಲಿಲ್ಲ. ಯಾಕೆಂದರೆ ಅದರಿಂದ ಅವರಿಗೆ ಲಾಭ ಆಗುತ್ತಿರಲಿಲ್ಲ. ಹಾಗಾಗಿ ಅವರು ಫಲಾನುಭವಿಗಳ ಪಟ್ಟಿಯನ್ನೂ ಕೊಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿತ್ತು. ಬಡವರ ಹೋರಾಟ ಮತ್ತು ನೋವನ್ನು ಕಾಂಗ್ರೆಸ್ ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ರಾಜ್ಯದ ಜನರ ಬಗ್ಗೆ ಯೋಚಿಸುವುದೇ ಇಲ್ಲ. ರಾಜ್ಯದಲ್ಲಿನ ಅಭಿವೃದ್ಧಿಯನ್ನು ಕಾಂಗ್ರೆಸ್ ಕುಂಠಿತಗೊಳಿಸಿದೆ. ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದ್ದು, ಬಿಜೆಪಿಯು ಬಡವರಿಗೆ ಮನೆ ಕಲ್ಪಿಸುವ ಯೋಜನೆಗೆ ವೇಗ ನೀಡಿದೆ. ಕರ್ನಾಟಕದಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟಿದ್ದೇವೆ. ಡಬಲ್ ಎಂಜಿನ್ ಸರ್ಕಾರದಿಂದ ಇದು ಸಾಧ್ಯವಾಗಿದೆ. ಜಲ್​ಜೀವನ್​ ಮಿಷನ್​ ಯೋಜನೆಯಡಿ ದೇಶದಲ್ಲಿ 9 ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಂದು ದೇಶದಲ್ಲಿ 9 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿಯೂ ಲಕ್ಷಾಂತರ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯ ಸರ್ಕಾರವೂ ಹಣ ಸೇರಿಸಿ ನೀಡಲಾರಂಭಿಸಿತು. ರಾಜಸ್ಥಾನದಲ್ಲಿ ಕಾಂಗ್ರೆಸ್​​ ಸರ್ಕಾರ ಸಾಲಮನ್ನಾ ಮಾಡುವುದಾಗಿ ಸುಳ್ಳು ಹೇಳಿ ರೈತರಿಗೆ ವಂಚಿಸಿದೆ.

ನಾನು ದೆಹಲಿಯಲ್ಲಿರುವ ನಿಮ್ಮ ಮನೆ ಮಗ

ಈ ಹಿಂದೆ ಹಳ್ಳಿಗಳಲ್ಲಿ ಶೌಚಾಲಯ ಇರಲಿಲ್ಲ, ಪ್ರತಿ ಮನೆಗೆ ಕುಡಿಯುವ ನೀರು ಬರುತ್ತಿರಲಿಲ್ಲ ಬಿಜೆಪಿ ಸರ್ಕಾರ ಇಂದು ಎಲ್ಲಾ ಮನೆಗಳಿಗೆ ಶೌಚಾಲಯ ನೀಡಿದೆ. ಪ್ರತಿ ಮನೆಗೆ ಕುಡಿಯುವ ನೀರು ಬರುತ್ತಿದೆ. ನಾನು ದೆಹಲಿಯಲ್ಲಿ ಕೂತಿರುವ ನಿಮ್ಮ ಮನೆ ಮಗ, ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆಂದು ಹೇಳಿದರು.

ನನ್ನನ್ನು ತೆಗಳುವುದರಲ್ಲೇ ಕಾಲ ಕಳೆಯುತ್ತಿದೆ ಕಾಂಗ್ರೆಸ್‌

ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್​​ನವರು ನನ್ನನ್ನು ನಿಂದಿಸುತ್ತಿದ್ದಾರೆ. 91 ಬಾರಿ ಕಾಂಗ್ರೆಸ್​​ನವರು ನನ್ನನ್ನು ಬೈದಿದ್ದಾರೆ. ನನಗೆ ಬೈಯ್ಯುವುದರಲ್ಲೇ ಕಾಂಗ್ರೆಸ್​​ನವರು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡುವವರನ್ನು ನಿಂದಿಸುವುದು ಕಾಂಗ್ರೆಸ್​​ನವರ ಚಾಳಿ. ಮೊದಲು ಚೌಕೀದಾರ್ ಚೋರ್ ಎಂದರು. ನನ್ನನ್ನು ನಿಂದಿಸಿದಾಗಲೆಲ್ಲ ಅವರಿಗೆ ಶಿಕ್ಷೆಯಾಗಿದೆ. ಡಾ.ಅಂಬೇಡ್ಕರ್​​ ಅವರನ್ನು ಕೂಡ ಕಾಂಗ್ರೆಸ್​​ನವರು ನಿಂದಿಸಿದ್ದಾರೆ. ಬಾಬಾ ಸಾಹೇಬ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದರು. ಅವರಂತ ಮಹಾನ್ ಪುರುಷರನ್ನೂ ಕಾಂಗ್ರೆಸ್​ ನಿಂದಿಸಿದೆ ಎಂದು ಆರೋಪಿಸಿದರು.

ಅವರು ನನ್ನನ್ನು ಬೈಯ್ಯುತ್ತಿರಲಿ ನಾನು ದೇಶದ, ದೇಶದ ಜನರ ಸೇವೆಯನ್ನು ಮುಂದುವರೆಸುತ್ತೇನೆ. ಕಾಂಗ್ರೆಸ್‌ನವರು ಬೈದಾಗಲೆಲ್ಲಾ ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಈ ಬಾರಿ ಕೂಡ ಅವರಿಗೆ ಜನ ಪಾಠ ಕಲಿಸಲಿದ್ದಾರೆಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!