25ನೇ ಬೆಂಗಳೂರು ಟೆಕ್ ಸಮ್ಮಿಟ್: ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‌ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ʻಬೆಂಗಳೂರು ಟೆಕ್‌ ಸಮ್ಮಿಟ್‌ʼ ಅನ್ನು ಇಂದು ಬೆಳಗ್ಗೆ 10ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್‌ ಮೂಲಕ ಚಾಲನೆ ನೀಡಿಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿರುವ ʻಬೆಂಗಳೂರು ಟೆಕ್‌ಸಮ್ಮಿಟ್‌ʼಗೆ 25 ವರ್ಷಗಳು ತುಂಬಿರುವ ಹಿನ್ನೆಲೆ ಇದು ರಜತ ಮಹೋತ್ಸವ ಸಂಭ್ರಮವಾಗಿದೆ.

ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರು ಅರಮನೆಯಲ್ಲಿ ಮೈದಾನದಲ್ಲಿ ನಡೆಯಲಿರುವ ಈ ಸಮ್ಮಿಟ್‌ ಅನ್ನು ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌ ಆಫ್‌ ಇಂಡಿಯಾ (ಎಸ್‌ಟಿಪಿಐ) ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಕಾರ್ಯಕ್ರಮದದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಸ್ಮರಣಿಕೆಯೊಂದನ್ನು ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ ಫಿನ್‌ಲ್ಯಾಂಡ್‌ನ ವಿಜ್ಞಾನ ಮತ್ತು ಸಂಸ್ಕೃತಿ ಸಚಿವ ಪೆಟ್ರಿ ಹೂನ್‌ಕೊನೆನ್‌, ಯುಎಇ ಕೃತಕ ಬುದ್ಧಿಮತ್ತೆ, ಡಿಜಿಟಲ್‌ ಆರ್ಥಿಕತೆ ಮತ್ತು ರಿಮೋಟ್‌ ವರ್ಕ್ ಅಪ್ಲಿಕೇಷನ್ಸ್‌ನ ರಾಜ್ಯ ಸಚಿವ ಒಮರ್‌ ಬಿನ್‌ ಸುಲ್ತಾನ್‌ ಅಲ್‌ ಒಲಾಮ, ಆಸ್ಪ್ರೇಲಿಯಾದ ಸಹಾಯಕ ವಿದೇಶಾಂಗ ಸಚಿವ ಟಿಮ್‌ ವ್ಯಾಟ್ಸ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಟಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಬೊಮ್ಮಾಯಿ, ನಾವು 25 ವರ್ಷಗಳ ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಆಚರಿಸುವ ಸಂದರ್ಭದಲ್ಲಿ, 25 ನೇ ಬೆಂಗಳೂರು ಟೆಕ್ ಶೃಂಗಸಭೆಯನ್ನು ಆಯೋಜಿಸಲು ಹೆಮ್ಮೆಪಡುತ್ತೇವೆ, ಸಮಾವೇಶದಲ್ಲಿ 575 ಪ್ರದರ್ಶಕ ಮಳಿಗೆಗಳಿರಲಿದ್ದು, ಅದರಲ್ಲಿ 350 ಸ್ಟಾರ್ಟಪ್‌ಗಳಿಗೆ ಸಂಬಂಧಿಸಿದ್ದಾಗಿವೆ. ನಾವೀನ್ಯತೆಗಳನ್ನು ಪ್ರಸ್ತುತಪಡಿಸಲು ಸ್ಟಾರ್ಟ್-ಅಪ್‌ಗಳು ಮತ್ತು ಯುನಿಕಾರ್ನ್‌ಗಳ ಅತಿದೊಡ್ಡ ಸಭೆಯಾಗಿದೆ. ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಪ್ರಪಂಚದ ಮುಂದೆ ನಮ್ಮನ್ನು ನಾವು ಸಾಬೀತುಪಡಿಸಲು ಬದ್ಧರಾಗಿದ್ದೇವೆ ಎಂದರು.

ಮೂರು ದಿನಗಳು ನಡೆಯುವ ಸಮಾವೇಶದಲ್ಲಿ ಮುಂದಿನ ತಲೆಮಾರಿನ ಜಾಗತಿಕ ತಂತ್ರಜ್ಞಾನ ಕ್ರಾಂತಿಯ ಬಗ್ಗೆ 75 ಚಿಂತನಾ ಗೋಷ್ಠಿಗಳು ಮತ್ತು ಸಂವಾದಗಳು ನಡೆಯಲಿವೆ. ಈ ಸಮ್ಮಿಟ್‌ನಲ್ಲಿ ಕೃತಕ ಬುದ್ಧಿಮತ್ತೆ, ಬಿಗ್‌ ಡಾಟಾ, ಸೆಮಿಕಂಡಕ್ಟರ್‌, ಮಷಿನ್‌ ಲರ್ನಿಂಗ್‌, 5ಜಿ, ರೋಬೋಟಿಕ್ಸ್‌, ಫಿನ್‌ಟೆಕ್‌, ಜೀನ್‌ ಎಡಿಟಿಂಗ್‌, ಮೆಡಿ ಟೆಕ್‌, ಸ್ಪೇಸ್‌ ಟೆಕ್‌, ಜೈವಿಕ ಇಂಧನ ಸುಸ್ಥಿರತೆ, ಇ-ಸಂಚಾರ ಸೇರಿದಂತೆ ಹಲವು ವಿಷಯಗಳ ತಾಂತ್ರಿಕ ಬೆಳವಣಿಗೆಗಳ ಕುರಿತು ಸಂವಾದ ನಡೆಸಲಾಗುತ್ತದೆ.

ಈ ಶೃಂಗಸಭೆಯಲ್ಲಿ ಜಪಾನ್‌, ಫಿನ್‌ಲ್ಯಾಂಡ್‌, ನೆದರ್‌ಲ್ಯಾಂಡ್‌, ಡೆನ್ಮಾರ್ಕ್, ಸ್ವೀಡನ್‌, ಸ್ವಿಟ್ಜರ್‌ಲ್ಯಾಂಡ್‌, ಜರ್ಮನಿ, ಆಸ್ಪ್ರೇಲಿಯಾ, ಲಿಥುವೇನಿಯಾ, ಕೆನಡಾ, ಅಮೆರಿಕ ಸೇರಿದಂತೆ 15ಕ್ಕೂ ಹೆಚ್ಚಿನ ರಾಷ್ಟ್ರಗಳು ಭಾಗವಹಿಸಲಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!