ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿಂದ ಮಂಜೂರಾದ ಭೂಮಿಗಳ ಪೋಡಿ ದಾಖಲೆ ದುರಸ್ತಿ ಅಭಿಯಾನ ಶನಿವಾರದಿಂದ ಆರಂಭಿಸಲಾಗು ತ್ತಿದ್ದು, ಈ ಕ್ರಮದಿಂದ ರಾಜ್ಯದ 20ರಿಂದ 25 ಲಕ್ಷ ರೈತ ಕುಟುಂಬ ಗಳಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 1.96 ಲಕ್ಷ ಸರ್ಕಾರಿ ಸರ್ವೇ ಸಂಖ್ಯೆಯಲ್ಲಿ ಭೂರಹಿತ ರೈತರಿಗೆ ಸರ್ಕಾರಿ ಭೂಮಿ ಮಂಜೂರು ಮಾಡಲಾಗಿದೆ. ಕಳೆದ 30ರಿಂದ 40 ವರ್ಷಗಳ ಹಿಂದೆಯೇ ಈ ಭೂಮಿ ಮಂಜೂರು ಮಾಡಲಾಗಿದ್ದರೂ, ಪೋಡಿ ದುರಸ್ತಿ ಮಾಡಿಲ್ಲ. ಇದರಿಂದ ಭೂಮಿ ಪಡೆದವರಿಗೆ ಪಹಣಿ ಸೇರಿದಂತೆ ಮತ್ತಿತರ ವಿಚಾರದಲ್ಲಿ ಸಮಸ್ಯೆಯಾಗುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಪೋಡಿ ದುರಸ್ತಿ ಕಾರ್ಯವನ್ನು ಆರಂಭಿಸಲಾಗುತ್ತಿದ್ದು, ಶನಿವಾರ ಹಾಸನದಲ್ಲಿ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪೋಡಿ ದುರಸ್ತಿಗಾಗಿ ಭೂಮಿಗೆ ಸಂಬಂಧಿಸಿದ ದಾಖಲೆಯ ನಮೂನೆ 1ರಿಂದ 5 ಮತ್ತು 6ರಿಂದ 10ನ್ನು ಸರಿಪಡಿಸಬೇಕಿದೆ. ಅದರಂತೆ ಈಗಾಗಲೇ 1. 1.96 ಲಕ್ಷ ಸರ್ವೇ ಸಂಖ್ಯೆಗಳ ಪೈಕಿ 27,107 ಸರ್ವೇ ಸಂಖ್ಯೆಗಳ ನಮೂನೆ 1ರಿಂದ 5ನ್ನು ಆನ್‌ಲೈನ್ ಮೂಲಕ ದಾಖಲಿಸುವ ಕಾರ್ಯ ಪೂರ್ಣಗೊಂಡಿದೆ. ಇನ್ನೊಂದು ತಿಂಗಳಲ್ಲಿ ಉಳಿದ ಸರ್ವೇ ಸಂಖ್ಯೆಯ ನಮೂನೆ 1ರಿಂದ 5ನ್ನು ದಾಖಲಿಸುವ ಕಾರ್ಯ ಪೂರ್ಣಗೊಳ್ಳಲಿದೆ.
ಉಳಿದಂತೆ ನಮೂನೆ 6ರಿಂದ 10 ಸರ್ವೇ ಕಾರ್ಯಕ್ಕೆ ಸಂಬಂಧಿಸಿದ್ದಾಗಿದ್ದು, ನಮೂನೆ 1ರಿಂದ 3ರ ದಾಖಲೆ ಆನ್‌ಲೈನ್‌ನಲ್ಲಿ ದಾಖಲಿಸಿದ ನಂತರ ಸರ್ವೇ ಕಾರ್ಯ ಆರಂಭಿಸಲಾಗುವುದು. ಮುಂದಿನ 8ರಿಂದ 10 ತಿಂಗಳಲ್ಲಿ ಪೋಡಿ ದುರಸ್ತಿ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಕ್ರಮದಿಂದಾಗಿ ಸರ್ಕಾರಿ ಭೂಮಿ ಹೊಂದಿರುವ 20ರಿಂದ 25 ಲಕ್ಷ ಕುಟುಂಬಗಳಿಗೆ ಸಮರ್ಪಕ ದಾಖಲೆಗಳು ದೊರೆಯಲಿದೆ ಎಂದರು.