ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ: ಹೆಣ್ಣು ಭ್ರೂಣದ ಕವಿತೆಗೆ ಶರಣಾದ ಕೇಳುಗರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮ್ಮಾ ನಿನ್ನ ಒಡಲಲ್ಲಿ ಅಂಕುರಿಸಿದ್ದು ಸಾಕು…ಹೆಣ್ಣು ಭ್ರೂಣ ಎಂದು ತಿಳಿದರೆ, ಹೊರತೆಗೆದು ಹೊಸಕಿ ಹಾಕುವರು… ಹೀಗೆಂದು ಕವಯತ್ರಿ ಕೆ. ಗಿರಿಜಾ ರಾಜಶೇಖರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಕವನ ಓದುತ್ತಿದ್ದರೆ, ಎದುರಿಗಿದ್ದ ಶೋತೃಗಳು ಮೌನವಾಗಿ ಆಲಿಸುತ್ತಿದ್ದರು. ಹೆಣ್ಣು ಭ್ರೂಣಕ್ಕೆ ತಾಯಿಯ ಗರ್ಭದಲ್ಲಿ ಶುರುವಾಗುವ ಸಂಕಟ, ನೋವು ಮುಂದೆ ಭ್ರೂಣಹತ್ಯೆಯ ತನಕ ಸಾಗಿ ಬರುವ ಅಮಾನೀಯತೆಯನ್ನು ತಮ್ಮಕವಿತೆಯಲ್ಲಿ ಹಿಡಿದಿಡುವ ಮೂಲಕ ಕೇಳುಗರ ಮನತಟ್ಟಿದರು.

ಕವಿ ಎಂ.ಎಸ್. ತುಕ್ಕಪ್ಪನವರ್ ಅವರು  ದೇಶ ರಕ್ಷಕ ಎಂಬ ಕವನ ಓದುವಾಗ ಅದೇ ಶೋತೃಗಳ ಮಧ್ಯದಿಂದ ಶಿಳ್ಳು, ಚಪ್ಪಾಳೆ ಮತ್ತು ಜೈಕಾರ ಮೊಳಿಗಿದ್ದು ವಿಶೇಷ.

ಗೋಷ್ಡಿಯುದ್ದಕ್ಕೂ 24 ಕವಿಗಳು ಬದುಕು-ಸವಾಲು ,ಜಾತಿ- ಮತಗಳ ಅಸಮಾನತೆ, ದೇಶಭಕ್ತಿ,  ದೈವ ಭಕ್ತಿ ,ಪ್ರೀತಿ-ಪ್ರೇಮ , ನಾಡು,ನುಡಿ,ಪರಿಸರ ಹೀಗೆ ವೈವಿಧ್ಯಮಯ ಕವನಗಳನ್ನು ಓದಿದರೆ,  ಶೋತೃಗಳು ಇವುಗಳಿಗೆ ಸ್ಪಂದಿಸಿದರು, ಸಂಭ್ರಮಿಸಿದರು. ಯುವ ಕವಿಗಳಿಂದ ಹಿಡಿದು 90 ರ ಆಸುಪಾಸಿನ  ಹಿರಿಯ ಕವಿ ಬಿ.ಕೆ.ಹೊಂಗಲ ಅವರತನಕದ ಕವಿಗಳು ಇಲ್ಲಿದ್ದರು.  ಬಿ.ಟಿ.ಅಂಬಿಕಾ ಅವರ ಮಂಡೋದರಿ, ಡಾ. ಸಿ. ಶಿವಣ್ಣ ಅವರ ವಲಸೆ, ಶ್ರೀಧರ ಶೇಟ್ ಅವರ ಅವಳ ಕಣ್ಣುಗಳಿಗೆ ವಿಶ್ರಾಂತಿ ಇಲ್ಲ ಕವನಗಳು  ಗಮನ ಸೆಳೆದವು.

ಅಧ್ಯಯನ ಬೇಕು:

ಆರಂಭದಲ್ಲಿ ಆಶಯ ನುಡಿ ಆಡಿದ ಹಿರಿಯ ಸಾಹಿತಿ ಡಾ. ಜಯಪ್ಪ ಹೊನ್ನಾಳಿ, ಇಂದಿನ ಕವಿಗಳಲ್ಲಿ ಆಳ ಅಧ್ಯಯನ ಇಲ್ಲ. ಕವಿಗಳಲ್ಲಿ ಅನುಸರಣೆ ಇರಲಿ, ಅನುಕರಣೆ ಬೇಡ. ಯಾರದ್ದೋ ಶಿಫಾರಸ್ಸಿನಿಂದ ಕವಿಗೋಷ್ಠಿಗಳಿಗೆ ಬರುವ ಬದಲು ಕೇಳುಗರ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆಯುವ ಹಂಬಲ ಇರಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಯತ್ರಿ ಮಲ್ಲಮ್ಮ ಆರ್ ಪಾಟೀಲ್  ಮಾತನಾಡಿ, ಇಲ್ಲಿ ಓದಿದ ಎಲ್ಲ ಕವನಗಳಲ್ಲಿ ಕವಿತ್ವ , ವೈವಿಧ್ಯತೆ ಇತ್ತು. ಸಾಹಿತ್ಯ ಅನ್ನುವುದು ಅನುಭವಗಳ ಅಭಿವ್ಯಕ್ತಿ ಅಲ್ಲ, ಅನುಭವಗಳ ಪರಿಣಾಮ  ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!